

ಬೆಂಗಳೂರು: ರೇಬಿಸ್ ನಿರ್ಮೂಲನೆಗೆ ರಚಿಸಿರುವ ಜಂಟಿ ಚಾಲನಾ ಸಮಿತಿಯು ಸಂಬಂಧಿಸಿದ ಎಲ್ಲ ಇಲಾಖೆ ಹಾಗೂ ತಜ್ಞರ ಸಲಹೆ ಆಧರಿಸಿ ಪರಿಣಾಮಕಾರಿಯಾದ ಕ್ರಿಯಾಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಬೇಕು ಎಂದು ಸರ್ಕಾರದ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಸೂಚನೆ ನೀಡಿದರು.
ವಿಕಾಸಸೌಧದಲ್ಲಿ ಗುರುವಾರ ರೇಬಿಸ್ ನಿರ್ಮೂಲನೆಗಾಗಿ ರಚಿಸಿರುವ ಜಂಟಿ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೇಬಿಸ್ ನಿರ್ಮೂಲನೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ರಚಿಸುವ ಸಮಿತಿಗಳಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕರ್ತವ್ಯ, ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬಿಬಿಎಂಪಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಅರಣ್ಯ, ವನ್ಯಜೀವಿ ಸಂರಕ್ಷಣಾ ಮಂಡಳಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಮನ್ವಯದೊಂದಿಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದರು.
ಬೆಂಗಳೂರು ನಗರದಲ್ಲಿ ಬೀದಿನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕುವ ಆಂದೋಲನ ಕೈಗೊಳ್ಳಲು ಪಾಲಿಕೆಯ ಪಶುಸಂಗೋಪನೆ ವಿಭಾಗಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಲಿನಿ ರಜನೀಶ್ ತಿಳಿಸಿದರು.
ನಿಯಂತ್ರಣ ಕ್ರಮಗಳ ಜಾರಿ ಮುಖ್ಯ:
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮಾತನಾಡಿ, ಕೆಎ್ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚು ವರದಿಯಾಗುವ ಜಿಲ್ಲೆಗಳ ತುಲನಾತ್ಮಕ ಅಧ್ಯಯನ ಮಾಡಿ ನಿಖರವಾದ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳಬೇಕು. ವಿವಿಧ ಪ್ರದೇಶಗಳ ಭೂಮಿಯ ಮಣ್ಣು ಹಾಗೂ ವಾತಾವರಣಕ್ಕೆ ಅನುಗುಣವಾಗಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಬೇಕಿದೆ ಎಂದರು.
ಮನೆ ಹಾಗೂ ಹಾಸ್ಟೆಲ್ಗಳಲ್ಲಿ ಇಲಿಗಳ ಮೂತ್ರವಿಸರ್ಜನೆಯಿಂದ ವಾತಾವರಣ, ನೀರು ಕಲುಷಿತವಾಗಿ ರೋಗ ಹರಡುವ ಸಾಧ್ಯತೆ ಇದೆ. ಪಶುವೈದ್ಯಕೀಯ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಿಸಬೇಕು. ಶಾಲಾ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ತಿಳಿವಳಿಕೆ ನೀಡುವುದು ಅಗತ್ಯ.
- ಎಂ.ಕೆ.ಸುದರ್ಶನ, ಆರೋಗ್ಯ ಕ್ಷೇತ್ರ ಪರಿಣಿತ