ಪ್ರವಾಹ ತಡೆಗಟ್ಟಲು ಶಾಶ್ವತ ಕಾರ್ಯಕ್ರಮ ರೂಪಿಸಿ

2-pnp 1
ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಡಾ.ಕುಮರ್, ಎಚ್.ತ್ಯಾಗರಾಜು, ಬಿ.ರೇವಣ್ಣ, ಎ.ಎಲ್.ಕೆಂಪೂಗೌಡ ಇತರರು ಇದ್ದರು.
Published on

ಪಾಂಡವಪುರ: ಕಾವೇರಿ ನದಿ ತಟದಲ್ಲಿರುವ ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ನಷ್ಟ ಹಾಗೂ ಪ್ರವಾಹ ತಡೆಗಟ್ಟಲು ರೂಪಿಸಬೇಕಾದ ಶಾಶ್ವತ ಕಾರ್ಯಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿ ಪ್ರವಾಹ ಉಂಟಾದಾಗಲೆಲ್ಲ ಗ್ರಾಮದ ಭಾಗಶಃ ಮನೆಗಳು ಮತ್ತು ಜಮೀನುಗಳಿಗೆ ನೀರು ನುಗ್ಗುತ್ತಿದ್ದು, ರೈತರು ಹಾಗೂ ಗ್ರಾಮಸ್ಥರಿಗೆ ಆತಂಕ ತಂದೊಡ್ಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿಯನ್ನು ಸಚಿವರು ಅವಲೋಕಿಸಿದರು.

ಗ್ರಾಮಕ್ಕೆ ನೀರು ನುಗ್ಗದಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಜುಲೈನಲ್ಲಿ ಸುರಿದಿರುವ ಮಳೆಯಿಂದಲೇ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇದೆ. ಅಣೆಕಟ್ಟೆಯಿಂದ ಎಷ್ಟೇ ಪ್ರಮಾಣದ ನೀರು ನದಿಗೆ ಹರಿದರೂ ಗ್ರಾಮಕ್ಕೆ ನೀರು ನುಗ್ಗದಂತೆ ತಡೆಗೋಡೆ ಹಾಗೂ ಇತತರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಈ ಹಿಂದೆ 10 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ಇನ್ನೂ ಎರಡು ಅಡಿ ಎತ್ತರಿಸಿದರೆ ಅನುಕೂಲವಾಗುತ್ತಿತ್ತು. ಜತೆಗೆ ತಡೆಗೋಡೆಯ ಹಿಂಬದಿಗೆ ಮಣ್ಣು ಸುರಿದು ಭರ್ತಿ ಮಾಡುವ ಕೆಲಸ ಆಗಿಲ್ಲ. ಇದರಿಂದ ತ್ಯಾಜ್ಯ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗ ಭಯ ಕಾಡುತ್ತಿದೆ. ಪ್ರವಾಹದಿಂದ ನೂರಾರು ಎಕರೆ ಬೆಳೆ ನಷ್ಟವಾಗಿದೆ. ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾಳಾಗಿದೆ ಎಂದು ರೈತರು ಸಚಿವರಿಗೆ ವಿವರಿಸಿದರು.

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಎಸ್.ಸಂತೋಷ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಸದಸ್ಯ ಬಿ.ರೇವಣ್ಣ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಮುಖಂಡರಾದ ಎಸ್.ದಯಾನಂದ, ರಾಘವೇಂದ್ರ, ಎಣ್ಣೆಹೊಳೆಕೊಪ್ಪಲು ಮಂಜು, ರಘು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net