

ಭಟ್ಕಳ: ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಈಗಾಗಲೆ ಶೇ. 90ರಷ್ಟು ಜನರಿಗೆ ತಲುಪುತ್ತಿದ್ದು, ಇನ್ನುಳಿದ ಕೆಲವರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದನ್ನು ಪರಿಹರಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಿ ತಾಲೂಕು ಮಟ್ಟದಲ್ಲಿ ಕಚೇರಿ ತೆರಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಶನಿವಾರ ಪಟ್ಟಣದ ತಾ.ಪಂ ಆವರಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಯುವನಿಧಿ ಸೇರಿ ಇತರ ಭಾಗ್ಯಗಳನ್ನು ನೀಡಲಾಗಿದೆ. ಸರ್ಕಾರ ಇದನ್ನು ಅನುಷ್ಠಾನಕ್ಕೂ ತಂದಿದೆ. ಸಮರ್ಪಕವಾಗಿ ಜಾರಿಯಾಗದಿದ್ದರೆ ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಾಲಯ ತೆರೆಯಲಾಗಿದೆ ಎಂದರು.
ತಾಪಂ ಇಒ ವೆಂಕಟೇಶ ನಾಯ್ಕ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ಪಿ. ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜನಾರ್ದನ ದೇವಡಿಗ, ತಾಲೂಕಾಧ್ಯಕ್ಷ ರಾಜು ನಾಯ್ಕ, ತಹಸೀಲ್ದಾರ್ ನಾಗರಾಜ ನಾಯ್ಕಡ, ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ ಇತರರು ಇದ್ದರು.