

ಶ್ರೀನಿವಾಸಪುರ: ದೇಶ ಕಾಯುವ ಸೈನಿಕ ಹಾಗೂ ಮನುಕುಲಕ್ಕೆ ಅನ್ನ ನೀಡುವ ರೈತ ಸಂಮೃದ್ಧಿಯಾಗಿದ್ದರೆ ದೇಶ ಸುಭಿಕ್ಷವಾಗಿರಲು ಸಾಧ್ಯ ಎಂಬ ಮಾತು ಎಷ್ಟು ಸತ್ಯವೋ, ಅಷ್ಟೇ ರೈತನಿಲ್ಲದೆ ನಮ್ಮ ಬದುಕು ಮುಂದೆ ಸಾಗದು. ಹೀಗಾಗಿ ರೈತರು ಮನುಕುಲದ ಅನ್ನದಾತರೂ ಹೌದು. ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನಿಗದಿತ ಬೆಳೆ ಇಲ್ಲದಿದ್ದರೂ ಸಹ ಬದುಕು ಸಾಗುತ್ತಿದೆ.
ಹೀಗಿರುವಾಗ ತಾಲೂಕಿನ ವಳಗೇರನಹಳ್ಳಿ ರೈತ ಎಸ್.ರಮೇಶ್ಕುಮಾರ್ ತನ್ನ 10 ಎಕರೆಯಲ್ಲಿ ಸೇವಂತಿಗೆ ಹೂವು, ಅವರೆಕಾಯಿ, ಹಾಗಲಕಾಯಿ, ಕ್ಯಾಪ್ಸಿಕಂ, ಟೊಮ್ಯಾಟೊ, ತೊಗರಿಕಾಯಿ, ಮಾವು, ಕೊತ್ತಂಬರಿ ಸೇರಿ ತರಹೇವಾರಿ ಬೆಳೆಗಳನ್ನು ಬೆಳೆದು ಇತರೆ ರೈತರಿಗೆ ಮಾದರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಜಮೀನಿನಲ್ಲಿ ಒಂದು ಬೋರ್ವೆಲ್ ಕೊರೆಸಿದ್ದು, ಅದರ ನೀರನ್ನೇ ಉಪಯೋಗಿಸಿಕೊಂಡು ಮನೆಯವರ ಸಹಕಾರ ಮತ್ತು ಕೂಲಿಗಳಿಂದ ನಿತ್ಯ ತನ್ನ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ರಮೇಶ್ಕುಮಾರ್.
ಕೃಷಿಯಲ್ಲಿ ನಷ್ಟವಿಲ್ಲ: ಒಂದು ಎಕರೆ ಕಾಪ್ಸಿಕಂ ಬೆಳೆ ತೆಗೆಯಲು 6 ಲಕ್ಷ ರೂ., ಒಂದು ಎಕರೆ ಟೊಮ್ಯಾಟೊ ಬೆಳೆಗೆ 4 ಲಕ್ಷ ರೂ., 1 ಎಕರೆ ಕೊತ್ತಂಬರಿಗೆ 1 ಲಕ್ಷ ರೂ. ಹಾಗೂ ಇತರೆ ಬೆಳೆಗಳಿಗೆ ಒಂದೊಂದು ರೀತಿಯ ಖರ್ಚು ಮಾಡಲಾಗುತ್ತದೆ. ಒಬ್ಬ ಕೂಲಿ ಕಾರ್ಮಿಕನಿಗೆ ದಿನಕ್ಕೆ 350 ರೂ.ನಂತೆ ನೀಡಿದರೂ, ಸಾಮಾನ್ಯವಾಗಿ ಒಂದು ಬೆಳೆಗೆ 3 ರಿಂದ 4 ಲಕ್ಷ ರೂ. ಲಾಭ ಸಿಗುತ್ತದೆ. ಕೆಲವೊಮ್ಮೆ ಫಸಲು ಹೆಚ್ಚಿದ್ದರೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಿದ್ದರೆ ಇನ್ನೂ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆಯಬಹುದು. ಒಂದೇ ಬೆಳೆಯನ್ನು ಅಧಿಕ ರೈತರು ಬೆಳೆದಾಗ ಬೆಲೆ ಕುಸಿಯುವ ಆತಂಕ ಹೆಚ್ಚಿರುತ್ತದೆ. ಆದರೆ, ಈವರೆಗೆ ಕೃಷಿಯಲ್ಲಿ ನಷ್ಟವಾಗಿಲ್ಲ ಎನ್ನುತ್ತಾರೆ ರೈತ ರಮೇಶ್ಕುಮಾರ್.
ಕೊಟ್ಟಿಗೆ ಗೊಬ್ಬರ ಬಳಕೆ: ಮನೆಯಲ್ಲಿ ಮೂರು ಸೀಮೆ ಹಸು, ಒಂದು ಎಮ್ಮೆ, 10 ಕುರಿ ಸಾಕಿದ್ದು, ಕೊಟ್ಟಿಗೆ ಗೊಬ್ಬರದ ಜತೆಗೆ ಸಾವಯವ ಗೊಬ್ಬರವನ್ನೂ ತಯಾರಿಸಿಕೊಳ್ಳುವುದರಿಂದ ಗೊಬ್ಬರ ಖರ್ಚು ಕಡಿಮೆ ಬರುತ್ತದೆ. ಎಲೆ, ಹಸಿ ಸೊಪು$್ಪಗಳು, ಬೇವು, ಹೊಂಗೆಸೊಪು$್ಪ ಸೇರಿ ಸಿಗುವ ಎಲ್ಲ ತ್ಯಾಜ್ಯವನ್ನು ಸಾವಯವ ಗೊಬ್ಬರ ತಯಾರಿಕೆಗೆ ನಿರ್ಮಿಸಿಕೊಂಡಿರುವ ತೊಟ್ಟಿಗೆ ಹಾಕಿ ಮಣ್ಣು, ನೀರನ್ನು ಹಾಕಿ ಎರೆಹುಳು ಬಿಡಲಾಗಿದೆ. ಸಾವಯವ ಕೃಷಿ ಪದ್ಧತಿಯಿಂದ ಭೂಮಿ ಹದ ಕಳೆದುಕೊಳ್ಳುವುದಿಲ್ಲ. ಇಳುವರಿಯೂ ಚೆನ್ನಾಗಿರುತ್ತದೆ. ಸೂಕ್ತ ರೀತಿಯಲ್ಲಿ ನೀರು ನಿರ್ವಹಣೆ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ಗಿಡಗಳಿಗೆ ಹಾಯಿಸಿದರೆ ಎಲ್ಲ ಗಿಡಗಳಿಗೆ ಪೂರೈಸಲು ಸಾಧ್ಯವಾಗುತ್ತದೆ. ಜೀವಾಮೃತ ಸಿಂಪಡಣೆ ಮಾಡುತ್ತಾರೆ. ಹೊಂಗೆ, ಬೇವಿನ ಎಣ್ಣೆ, ತಯಾರಿಸಿಕೊಂಡು ಹಲವು ರೋಗಗಳ ನಿಯಂತ್ರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಮಾದರಿ ರೈತ.
ಇಂದು ಭೂಮಿರೈತ ಪ್ರಶಸ್ತಿ ಪ್ರದಾನ: ಡಿ.22ರಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಭೂಮಿ ಸಂಸ್ಥೆಯ ಸಂಸ್ಥಾಪಕ ಕಾರ್ಯನಿರ್ವಹಣಾಧಿಕಾರಿ ರಘುನಂದನ್ ಅವರ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಎಸ್.ರಮೇಶ್ಕುಮಾರ್ ಅವರಿಗೆ ಭೂಮಿ ರೈತ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾಜ್ಯದ 200 ರೈತರಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ರಮೇಶ್ಕುಮಾರ್ ಅವರೂ ಒಬ್ಬರಾಗಿದ್ದಾರೆ.
ಯೋಜನಾಬದ್ಧ ಕೃಷಿಯನ್ನು ಹವಾಮಾನಕ್ಕೆ ಪೂರಕವಾಗಿ ಅಳವಡಿಸಿಕೊಂಡು ಕೆಲಸ ಮಾಡಿದರೆ ನಷ್ಟವಾಗುವುದಿಲ್ಲ. ಇಂದಿನ ಸ್ಥಿತಿಯಲ್ಲಿ ಕೇವಲ ಸಾವಯವ ಕೃಷಿಯಿಂದ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲ. ಭೂಮಿಯ ಬರಡನ್ನು ಕ್ರಮೇಣವಾಗಿ ಬದಲಾಯಿಸಬೇಕು. ಹಾಗಾಗಿ ಸಾವಯವ ಗೊಬ್ಬರ ಹಾಗೂ ರಾಸಾಯನಿಕ ಕೃಷಿ ಪದ್ಧತಿ ಜತೆ ಜತೆಯಾಗಿ ನಡೆಸಿಕೊಂಡು ಕಾಲ ಕ್ರಮೇಣದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿಗೆ ಹೊಂದಿಸಿಕೊಳ್ಳಬೇಕು. - ಎಸ್.ರಮೇಶ್ಕುಮಾರ್ ಪ್ರಗತಿಪರ ರೈತ. ವಳಗೇರನಹಳ್ಳಿ ಎಸ್.ರಮೇಶ್ ಕುಮಾರ್ 15 ವರ್ಷದಿಂದ ಕೃಷಿ ಇಲಾಖೆಯಲ್ಲಿ ಅನುವುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಕೆಲಸದಿಂದ ಬಿಡುಗಡೆಗೊಳಿಸಿದ ನಂತರ ಗ್ರಾಮದಲ್ಲಿ ಕೃಷಿ ಕಾಯಕ ಮಾಡುತ್ತಿದ್ದಾರೆ. ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜತೆಗೆ ಸಲಹೆ, ಸಹಕಾರ ಪಡೆದುಕೊಳ್ಳುತ್ತಿದ್ದಾರೆ. - ಕೆ.ಸಿ.ಮಂಜುನಾಥ್ ಸಹಾಯಕ ಕೃಷಿ ನಿರ್ದೇಶಕ. ಶ್ರೀನಿವಾಸಪುರ ಎಸ್.ರಮೇಶ್ಕುಮಾರ್ ಅವರಿಗೆ ಪ್ರದಾನಮಂತ್ರಿ ಕೃಷಿ ಯೋಜನೆಯಲ್ಲಿ ಜಮೀನಿಗೆ ಗೇಟ್, 2 ಎಕರೆ ಹನಿ ನೀರಾವರಿಗೆ ಡ್ರಿಪ್ ಪೈಪ್ಗಳು, ಕೃಷಿಹೊಂಡ ನೀಡಲಾಗಿದೆ. ಈ ಎಲ್ಲ ಯೋಜನೆಗಳಿಗೂ ಸಹಾಯಧನ ನೀಡಲಾಗಿದೆ. ಜತೆಗೆ ತೋಟಗಾರಿಕೆ ಬೆಳೆಗಳಿಗೆ ಸಲಹೆ, ಸಹಕಾರ ಪಡೆದುಕೊಂಡಿದ್ದಾರೆ. - ಬೈರೆಡ್ಡಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಶ್ರೀನಿವಾಸಪುರ