ವಿವಿಧ ಬೇಡಿಕೆ ಈಡೇರಿಕೆಗೆ ರೈತರ ಪಟ್ಟು

12 pvg raitha protost 1
Published on

ಪಾವಗಡ : ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಪಾವಗಡ ತಾಲೂಕು ರೈತ ಸಂಘದಿಂದ ಪಟ್ಟಣದ ಎಸ್‌ಬಿಐ ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಮಾತನಾಡಿ, ಎಸ್‌ಬಿಐ ಮ್ಯಾನೇಜರ್ ಮತ್ತು ಸಿಬ್ಬಂದಿ ರೈತರೊಂದಿಗೆ ಸರಿಯಾಗಿ ವರ್ತಿಸದೇ ಶೋಷಣೆ ಮಾಡುತ್ತಿದ್ದು, 6 ತಿಂಗಳಿಂದ ಸಾಲಮನ್ನಾ ಆದ ರೈತರ ಒಟಿಎಸ್ ಮಾಡದೆ ದಾಖಲಾತಿ ಸರಿ ಇಲ್ಲ್ಲ ಎಂಬ ನೆಪವೊಡ್ಡಿ ಸಾಲಮನ್ನಾ ಮಾಡದೇ ಸತಾಯಿಸುತ್ತಿದ್ದಾರೆ ಎಂದರು.

2019-20ನೇ ಸಾಲಿನ ಬೆಳೆವಿಮೆ ಬಿಡುಗಡೆ ಮಾಡಬೇಕು, ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪರಿಹಾರ ಧನ ಮತ್ತು ಬೆಳೆವಿಮೆ ಹಣವನ್ನು ಸಾಲದ ಖಾತೆಗೆ ಜಮಾ ಮಾಡದೆ ರೈತರಿಗೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರೊನಾದಿಂದ ರೈತರು ಸಂಕಷ್ಟದಲ್ಲಿದ್ದು, ಬ್ಯಾಂಕ್‌ನ ಅಧಿಕಾರಿಗಳು ರೈತರ ಕಷ್ಟ ಅರಿತು ನಡೆದುಕೊಳ್ಳಬೇಕೆಂದು ವೀರಮ್ಮನಹಳ್ಳಿ ಆದಿವೇಣಿ ಆಗ್ರಹಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ತುಮಕೂರು ಬ್ಯಾಂಕ್‌ನ ಎಜಿಎಂ ನಾಗೇಶ್ ಸ್ಥಳಕ್ಕಾಗಮಿಸಿದಾಗ ಮ್ಯಾನೇಜರ್ ವೆಂಕಟರಾವ್ ಮತ್ತು ಫೀಲ್ಡ್ ಆಫೀಸರ್ ಪ್ರಸನ್ನ ವಿರುದ್ಧ ರೈತರು ತೀವ್ರ ವಾಗ್ದಾಳಿ ನಡೆಸಿದರು.

6 ತಿಂಗಳಿಂದ ಈ ಇಬ್ಬರೂ ರೈತರ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಜಿಎಂ ನಾಗೇಶ್, ಅಧಿಕಾರಿಗಳ ತಪ್ಪಿಗೆ ಕ್ಷಮೆಯಾಚಿಸುತ್ತೇನೆ, ಕರೊನಾ ಸಂಕಷ್ಟದಲ್ಲಿ ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ದಯವಿಟ್ಟು ಸಹಕರಿಸಿ ಎಂದು ರೈತರಲ್ಲಿ ಮನವಿ ಮಾಡಿದರು. ರೈತರ ಎಲ್ಲ ಬೇಡಿಕೆ ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಜೆಡಿಎಸ್ ರೈತ ಘಟಕದ ತಾಲೂಕು ಅಧ್ಯಕ್ಷ ಗಂಗಾಧರ್ ನಾಯ್ಡು, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೊಂಡನ್ನ ಮಧು, ಪಿ.ವಿ.ವೇಣುಗೋಪಾಲ್, ಹೋಂಗಾರ್ಡ್ ಅಂಜಿನಪ್ಪ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net