

ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ ಈ ವರ್ಷ ಎಪಿಎಂಸಿ ಯಾರ್ಡ್‌ನಲ್ಲಿ ಮಾವು ಮಾರುಕಟ್ಟೆ ಪ್ರಾರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆ ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಜಿಲ್ಲಾಧಿಕಾರಿ ಸತ್ಯಭಾಮ ಅಧ್ಯಕ್ಷತೆಯಲ್ಲಿ ನಡೆದ ರೈತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪರ-ವಿರೋಧಗಳ ಚರ್ಚೆಗೆ ವೇದಿಕೆಯಾಯಿತು. ಜಿಲ್ಲಾಧಿಕಾರಿ ರೈತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದಾಗ ರೈತರ ಪರವಾಗಿ ರೈತ ಸಂಘದ ಮುಖಂಡರಾದ ವೀರಭದ್ರಸ್ವಾಮಿ, ಪಿ.ಆರ್.ಸೂರಿನಾರಾಯಣ, ಎನ್.ಶ್ರೀರಾಮರೆಡ್ಡಿ, ಎ.ಎನ್. ಜಯರಾಮರೆಡ್ಡಿ, ಕೊಟ್ರಗೂಳಿ ವೆಂಕಟರಾಮರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಶ್ರೀನಿವಾಸಪುರ ಕರೊನಾದಿಂದ ಮುಕ್ತವಾಗಲು ಈ ವರ್ಷ ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸುವುದು ಬೇಡ. ದಲಾಗಿ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು. ಮಂಡಿ ಪ್ರಾರಂಭಿಸದಿದ್ದರೆ ವಹಿವಾಟು ನಡೆಸುವುದು ಕಷ್ಟ. ಎಲ್ಲ ರೈತರು ಆನ್‌ಲೈನ್ ಮೂಲಕ ವ್ಯಾಪಾರ ಮಾಡುವುದು ಸಾಧ್ಯವಿಲ್ಲ ಹಾಗೂ ಬೆಂಗಳೂರಿನಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಮಂಡಿಯನ್ನು ಈ ವರ್ಷ ಪ್ರಾರಂಭಿಸಬೇಕು. ಕರೊನಾ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮಂಡಿ ವರ್ತಕರಾದ ಅನೀಸ್, ಹೆಬ್ಬಟ ವೆಂಕಟರೆಡ್ಡಿ, ಪ್ರಗತಿಪರ ರೈತ ರಾಜಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮಧ್ಯೆ ಪರ-ವಿರೋಧದ ಕೂಗು ಸಭೆಯಲ್ಲಿ ಕೇಳಿಬಂತು. ಮಧ್ಯೆ ಮಧ್ಯೆ ಡಿಸಿ ಎಚ್ಚರಿಕೆ ನೀಡಿದರೂ ಮಂಡಿ ವರ್ತಕರ ಪರವಾಗಿ ಆಗಮಿಸಿದ್ದ ಕೆಲ ದಲ್ಲಾಳಿ ರೈತರು ಮಂಡಿಯನ್ನು ಪ್ರಾರಂಭಿಸಲೇಬೇಕು ಎಂದು ಚಪ್ಪಾಳೆ ತಟ್ಟಿದಾಗ ಸಿಡಿಮಿಡಿಗೊಂಡ ಡಿಸಿ, ಈ ಸಭೆಗೆ ರೈತರನ್ನು ಮಾತ್ರ ಕರೆಯಲಾಗಿದೆ. ವರ್ತಕರ ಸಭೆ ಎರಡು-ಮೂರು ಬಾರಿ ಕರೆದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಈಗೇಕೆ ಬಂದಿರಿ ಎಂದು ಗಲಾಟೆಗೆ ಮುಂದಾಗುತ್ತಿದ್ದ ಕೆಲವು ವರ್ತಕರನ್ನು ಸಭೆಯಿಂದ ಹೊರಹಾಕಲು ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್‌ಗೆ ಸೂಚಿಸಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಅಧಿಕಾರಿಗಳು ಹೇಳುವ ಮಾತು ಕೇಳಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮನ್ನು ಹೊರಹಾಕಲಾಗುವುದು ಎಂದು ಎಚ್ಚರಿಸಿದರು. ಹಮಾಲಿ ಸಂಘದ ಅಧ್ಯಕ್ಷ ಮೂರ್ತಿ ಮಾತನಾಡಿ, ಮಾವು ಮಾರುಕಟ್ಟೆ ಪ್ರಾರಂಭವಾದರೆ ಕಾರ್ಮಿಕರಿಗೆ ತೊಂದರೆಯಾಗುತ್ತದೆ. ಕಾರ್ಮಿಕರ ಹಿತ ಕಾಪಾಡುವವರು ಯಾರು. ಯಾವುದೇ ಕಾರಣಕ್ಕೂ ಮಾರುಕಟ್ಟೆ ಪ್ರಾರಂಭ ಬೇಡ ಎಂದು ತಿಳಿಸಿದಾಗ ಹೆಬ್ಬಟ ವೆಂಕಟರೆಡ್ಡಿ ಮಂಡಿ ಪ್ರಾರಂಭಿಸಲೇ ಬೇಕು. ಕರೊನಾ ಬಂದರೆ ಒಂದೆರಡು ಸಾವು ಸಂಭವಿಸಿದರೆ ಅದಕ್ಕೆ ನಾವೇನು ಮಾಡುವುದು ಎಂದಾಗ ಸಭೆ ಗೊಂದಲದ ಗೂಡಾಯಿತು. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ನಿಮ್ಮ ಅಭಿಪ್ರಾಯ ತಿಳಿಸಿ, ನಾವು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು. ಎಪಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಹೆಚ್ಚುವರಿ ಶೌಚಗೃಹ, ಕುಡಿಯುವ ನೀರು, ತನಿಖಾ ಠಾಣೆ ಸೇರಿ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದರು. ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಮಾವು ಮಾರುಕಟ್ಟೆ ಪ್ರಾರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸೋಂಕು ಪತ್ತೆಯಾದರೆ ಮಾರುಕಟ್ಟೆ ಸೀಲ್‌ಡೌನ್ ಮಾಡಲಾಗುವುದು. ಇದಕ್ಕೆ ಪರ್ಯಾಯವಾಗಿ ನೀವೇ ವ್ಯಾಪಾರ ಹೇಗೆ ನಡೆಸಬೇಕು ಎಂಬುದರ ಬಗ್ಗೆ ತೀರ್ಮಾನಿಸಿ ಎಂದು ತಿಳಿಸಿ ಸಭೆ ಮುಕ್ತಾಯಗೊಳಿಸಿದರು. ಅಧಿಕಾರಿಗಳಾದ ಇಒ ಎಸ್. ಆನಂದ್, ಮಾವು ಮಂಡಳಿ ಉಪನಿರ್ದೇಶಕ ಬಾಲಕೃಷ್ಣ, ಟಿಎಚ್‌ಒ ಡಾ.ವಿಜಯಾ ಇದ್ದರು.
ರೈತರಿಗೆ ಆನ್‌ಲೈನ್ ಸೇರಿ ಎಲ್ಲ ರೀತಿಯ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಕೆಲ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೂ ಮಾರುಕಟ್ಟೆ ಪ್ರಾರಂಭಿಸಿದರೆ ಅನೇಕ ರೈತರಿಗೆ ಉಪಯೋಗವಾಗಲಿದೆ. ಕರೊನಾ ಹರಡದಂತೆ ಎಚ್ಚರಿಕೆ ವಹಿಸಲಾಗುವುದು. ಗಾಯತ್ರಿ, ತೋಟಗಾರಿಕಾ ಉಪನಿರ್ದೇಶಕಿ