

ವಿಜಯವಾಣಿ ಸುದ್ದಿಜಾಲ ವಿಜಯಪುರ
ರೈತರು ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡಲ್ಲಿ ಗುಣಮಟ್ಟದ ರೇಷ್ಮೆ ಉತ್ಪಾದನೆ ಸಾಧ್ಯವಾಗಲಿದೆ ಎಂದು ರೇಷ್ಮೆಹುಳು ಉತ್ಪಾದನಾ ಕೇಂದ್ರದ ವಿಜ್ಞಾನಿ ಡಾ.ಎಂ.ಮುನಿಸ್ವಾಮಿ ರೆಡ್ಡಿ ತಿಳಿಸಿದರು.
ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯ ಬಳಿಯ ರೇಷ್ಮೆ ಹುಳು ಬೀಜೋತ್ಪಾದನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರೈತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ,ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಗುಣಮಟ್ಟದ ರೇಷ್ಮೆ ಮೊಟ್ಟೆ ಉತ್ಪಾದಿಸಿ ಕರ್ನಾಟಕವಲ್ಲದೆ ಹೊರ ರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಗುಣಮಟ್ಟದ ರೇಷ್ಮೆ ಉತ್ಪಾದನೆ ಪ್ರೋತ್ಸಾಹಿಸಲು ಇಲಾಖೆ ಅನೇಕ ಕಾರ್ಯಕ್ರಮಗಳನ್ನೂ ರೂಪಿಸಿದ್ದು, ರೈತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ಕಾರ್ಯಾಗಾರ ಹಾಗೂ ಆಧುನಿಕ ಪದ್ಧತಿಯಲ್ಲಿ ರೇಷ್ಮೆ ಉತ್ಪಾದನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಜ್ಯದ ಇತರ ಜಿಲ್ಲೆಗಳಿಗಿಂತ ಬೆಂ.ಗ್ರಾಮಾಂತರ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೇಷ್ಮೆ ಬೇಸಾಯಕ್ಕೆ ಉತ್ತಮ ವಾತಾವರಣವಿದ್ದು, ಈ ಭಾಗದ ಬೆಳೆಗಾರರು ಲಾಭದಾಯಕ ಬೇಸಾಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರೈತಪರ ಹೋರಾಟಗಾರ ಮಳ್ಳೂರು ಶಿವಣ್ಣ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದೆ ರೈತರು ನಷ್ಟ ಅನುಭವಿಸುವಂತಾಗಿದೆ. ಆಡಳಿತಕ್ಕೆ ಬರುವ ಸರ್ಕಾರಗಳು ಸಹ ರೈತಪರ ಧ್ವನಿಯೆತ್ತದೆ ಭರವಸೆಗಳಿಷ್ಟೇ ಸೀಮಿತವಾಗಿವೆ.
ಈ ಭಾಗದಲ್ಲಿ ಸಾಕಷ್ಟು ಚಾಕಿ ಕೇಂದ್ರಗಳಿದ್ದರೂ ಮಾರ್ಗದರ್ಶನ ಕೊರತೆಯಿಂದ ಸಮರ್ಪಕ ಬಳಕೆಯಾಗುತ್ತಿಲ್ಲ. ಹಾಗಾಗಿ ಇನ್ನಷ್ಟು ಚಾಕಿ ಕೇಂದ್ರಗಳು ಹಾಗೂ ಪ್ರಯೋಗ ಶಾಲೆಗಳ ಅಗತ್ಯ ಹೆಚ್ಚಿದ್ದೆ. ಹಾಗೆಯೇ ರೈತರು ಸಹ ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.