

ಶ್ರೀನಿವಾಸಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೋಲಿನ ನಂತರ ಸಾರ್ವಜನಿಕರಿಂದ ಬಹುದಿನಗಳ ಕಾಲ ದೂರವಿದ್ದರು. ಇತ್ತೀಚಿಗೆ ತಾಲೂಕಿನಲ್ಲಿ ಕೆಲವೊಂದು ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿದ್ದು, ತಾಲೂಕಿನ ಮಾವು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕ್ಷೇತ್ರದ ಜನತೆ ಒತ್ತಾಯದ ಮೇರೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾವು ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಮಾವು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಹೋರಾಟ ಮತ್ತು ಬಂದ್ ಸಹ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ರೈತರ ನಿಯೋಗ ಹೋಗಿ ಬೆಂಬಲ ಬೆಲೆಗೆ ಒತ್ತಾಯಿಸಿದರು. ಮುಖ್ಯಮಂತ್ರಿಗಳ ಬಳಿ ರೈತರ ಸಮಸ್ಯೆಯನ್ನು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೊಂದಿಗೆ ಮಾವು ಬೆಂಬಲ ಬೆಲೆ ವಿಷಯದ ಬಗ್ಗೆ ಚರ್ಚೆ ಮಾಡಲು ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ಪೂರ್ವನಿಯೋಜಿತವಾಗಿ ಸಭೆ ಆಯೋಜಿಸಲಾಗಿತ್ತು.
ಕೃಷಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾವಿಗೆ ಬೆಂಬಲ ಬೆಲೆ ವಿಷಯ ಚರ್ಚಿಸಿದ್ದಾರೆ.
ಗುರುವಾರ ಮಂತ್ರಿಮಂಡಲ ಸಭೆಯಲ್ಲಿ ಚರ್ಚಿಸಿ ಶುಕ್ರವಾರ ಬೆಂಬಲಬೆಲೆ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಜನಪ್ರತಿನಿಧಿಗಳನ್ನು ಕರೆದೊಯ್ಯದ ಮಾಜಿ ಸ್ಪೀಕರ್
ಇತ್ತೀಚಿಗೆ ಪಕ್ಷದ ಶಾಸಕರ ವಿರುದ್ಧವೇ ಅಂತರ ಕಾಯ್ದುಕೊಂಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತು ಕೋಮುಲ್ ಚುನಾವಣೆಯಲ್ಲಿ ರಮೇಶ್ ಕುಮಾರ್ ಹೆಸರನ್ನು ಮುನ್ನೆಲೆಗೆ ತಂದು ತಮಗೆ ಬೇಕಾದ ಅಭ್ಯರ್ಥಿಗಳನ್ನು ಕ್ಷೇತ್ರಗಳಿಗೆ ಆಯ್ಕೆ ಮಾಡಿಕೊಂಡಿರುವ ಕಾರಣ ಜಿಲ್ಲೆಯ ಕಾಂಗ್ರೇಸ್ ಶಾಸಕರಿಂದ ದೂರ ಸರಿದಿರುವ ಅವರು ಇತ್ತೀಚಿಗೆ ಜಿಲ್ಲೆಯಲ್ಲಿ ಮಾವು ಹಾಗೂ ಟೊಮ್ಯಾಟೊ ಬೆಲೆ ಕುಸಿದಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಕಾಂಗ್ರೆಸ್ ಶಾಸಕರು ಅದರ ಬಗ್ಗೆ ಧ್ವನಿ ಎತ್ತದೆ ಇರುವುದರಿಂದ ಇವರಿಗೆ ಚುನಾವಣೆಗಳೆ ಮುಖ್ಯ ಹೊರತು ರೈತರ ಸಮಸ್ಯೆಗಳು ಮುಖ್ಯವಲ್ಲ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಮಾವು ಬೆಂಬಲ ಬೆಲೆ ವಿಷಯ ಚರ್ಚೆ ಮಾಡಲು ಕೃಷಿ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ರಮೇಶ್ ಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.