

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಆಳುವ ಸರ್ಕಾರಗಳು ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ. ಇದರೊಟ್ಟಿಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸ್ವಹಿತವಾಗಿ, ರಾಜಕೀಯ ಪ್ರೇರಿತವಾದ ಅವ್ಯೆಜ್ಞಾನಿಕವಾದ ತೀರ್ಪು ನೀಡುತ್ತಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್(ಜನ್ನಿ) ಕಿಡಿಕಾರಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಕಾವೇರಿ ಹೋರಾಟಕ್ಕೆ ಬುಧವಾರ ಬೆಂಬಲ ಸೂಚಿಸಿ ಮಾತನಾಡಿದ ಅವರು, ಕೆಲಸಕ್ಕೆ ಬಾರದ ವಿಚಾರಕ್ಕೆಲ್ಲ ಬೀದಿಗೆ ಬರುವ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಎರಡು ರಾಜ್ಯಗಳ ನಡುವೆ ನೀರಿನ ಸಮಸ್ಯೆ ಉಲ್ಬಣಿಸಿದರೂ ಮಧ್ಯಪ್ರವೇಶ ಮಾಡಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಕೇಂದ್ರ ತಂಡ ಅಧ್ಯಯನ ಮಾಡಿ ವರದಿ ನೀಡಿದೆ. ಆದರೂ ಸಹ ಸುಳ್ಳು ಭರವಸೆ ನೀಡಿ ಕಾಲ ಹರಣ ಮಾಡುತ್ತಿದ್ದು, ಕಾವೇರಿ ವಿಚಾರದಲ್ಲಿ ನರೇಂದ್ರ ಮೋದಿ ಮೂರನೇ ದರ್ಜೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶಿಸಿದರು.
ರಾಜ್ಯದ 28 ಸಂಸದರು ಕಾವೇರಿ ವಿಚಾರವಾಗಿ ಮೌನವಹಿಸಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸದಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿ ರೂಪಿಸಲು ಮುಂದಾಗಬೇಕು. ಅಗತ್ಯ ಬಿದ್ದರೆ ಕಾನೂನು ತಿದ್ದುಪಡಿ ಮಾಡಬೇಕು. ಈ ಮೂಲಕ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಡಿಎಸ್‌ಎಸ್ ಬೆಂಬಲ: ಧರಣಿಗೆ ಬೆಂಬಲ ಸೂಚಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮಾತ್ರವಲ್ಲದೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯೊಂದಿಗೆ ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ಹೋರಾಟಗಾರ ಎಂ.ಬಿ.ಶ್ರೀನಿವಾಸ್ ಅವರ ಎರಡನೇ ರ್ಷದ ಪುಣ್ಯಸ್ಮರಣೆ ನಿಮಿತ್ತ ಮೌನಾಚರಣೆ ಮೂಲಕ ಸಮಿತಿ ಸಂತಾಪ ಸೂಚಿಸಿತು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಮುಖಂಡರಾದ ಎಂ.ವಿ.ಕೃಷ್ಣ, ಎಚ್.ಬಿ.ಜವರಪ್ಪ, ಹಲಗಯ್ಯ, ಮಾಚಳ್ಳಿ ಕೃಷ್ಣಪ್ಪ, ಶಿವಣ್ಣ, ಚುಂಚಯ್ಯ, ಎಂ.ಬಿ.ಶ್ರೀನಿವಾಸ್ ಕುಟುಂಬದ ಶೋಭಾ, ರಾಹುಲ್, ಪ್ರಿಯಾಂಕಾ ಇತರರಿದ್ದರು.