ಬಡಾವಣೆಗೊಂದು ಆಟದ ಮೈದಾನ ನಿರ್ಮಿಸಿ; ಮಕ್ಕಳ ಕೂಟದಲ್ಲಿ ಡಾ.ಎಲ್.ಹನುಮಂತಯ್ಯ ಒತ್ತಾಯ

makkala
Published on

ಬೆಂಗಳೂರು: ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಯೂ ಮುಖ್ಯವಾಗಿದ್ದು, ಮಕ್ಕಳ ಆಟೋಟಗಳಿಗಾಗಿ ನಗರದ ಪ್ರತಿ ಬಡಾವಣೆಗೊಂದು ಮೈದಾನ ನಿರ್ಮಿಸಬೇಕು ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದ್ದಾರೆ.

ಚಾಮರಾಜಪೇಟೆಯ ಅಖಿಲ ಕರ್ನಾಟಕ ಮಕ್ಕಳ ಕೂಟದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಮತ್ತು ಡಾ.ಜೀವರಾಜ ಆಳ್ವ ದತ್ತಿನಿಧಿ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆಟೋಟಕ್ಕೆ ಸಾಕಷ್ಟು ಸ್ಥಳ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಭೂಮಿಗೆ ಹೆಚ್ಚಾದ ಬೇಡಿಕೆಯಿಂದಾಗಿ ಮಕ್ಕಳ ಆಟಕ್ಕೆ ಜಾಗವೇ ಇಲ್ಲದಂತಾಗಿದೆ. ಬಿಡಿಎ ಹೊಸದಾಗಿ ನಿರ್ಮಿಸುವ ಬಡಾವಣೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಕ್ರೀಡೆಗಾಗಿ ಮೈದಾನವನ್ನು ನಿರ್ಮಿಸಬೇಕು. ಮಕ್ಕಳ ಕೂಟವನ್ನು ಸಂಸ್ಥಾಪಿಸಿದ ಆರ್.ಕಲ್ಯಾಣಮ್ಮನವರಿಗೆ ದೇಸಿ ಕ್ರೀಡೆಗಳ ಬಗ್ಗೆ ಹೆಚ್ಚಿನ ಒಲವಿತ್ತು. ಲಗೋರಿ, ಖೋಖೋ, ಕಬ್ಬಡಿ ಇತ್ಯಾದಿ ದೇಸಿ ಆಟಗಳನ್ನು ಮಕ್ಕಳು ಆಡುವುದರಿಂದ ಅತಿಯಾದ ಮೊಬೈಲ್ ಬಳಕೆಯಿಂದಾಗುವ ಹಾನಿಯನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಬಡಾವಣೆಗಳಲ್ಲಿ ಆಟದ ಮೈದಾನ ನಿರ್ಮಿಸಲು ಮಕ್ಕಳು ಒತ್ತಾಯ ಮಾಡಬೇಕು. ಅವಶ್ಯಕತೆ ಬಂದರೆ ವಿಧಾನ ಸೌಧದ ಮುಂದೆ ಧರಣಿ ಮಾಡಿಯಾದರೂ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕು. ಜೊತೆಗೆ ಮಕ್ಕಳಕೂಟವು ನಗರದ ಇತರೆ ಬಡಾವಣೆಗಳಲ್ಲಿ ತನ್ನ ಶಾಖೆಗಳನ್ನು ತೆರೆದು ಅವಕಾಶ ವಂಚಿತ ಮಕ್ಕಳನ್ನು ಪ್ರೋತ್ಸಾಹಿಸಲು ಮುಂದಾಗಬೇಕು ಎಂದು ಹನುಮಂತಯ್ಯ ಹೇಳಿದರು.

ಸಮಾರಂಭದಲ್ಲಿ ಡಾ.ಜೀವರಾಜ್ ಆಳ್ವ ದತ್ತಿನಿಧಿ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಶಾಲೆಯ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಸುನಂದ ರು. ಬಸಪ್ಪ, ಮಕ್ಕಳಕೂಟದ ಪ್ರೊ.ಕೆ.ಪಿ.ನರಸಿಂಹಮೂರ್ತಿ, ಎಂ.ಜಿ. ವೆಂಕಟೇಶ್, ಎಸ್.ವಿ.ವೆಂಕಟಾಚಲಂ, ಎಂ.ರಾಘವೇಂದ್ರ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಹಣದ ದಾಹಕ್ಕೆ ಬಲಿಯಾಗಬಾರದು

ಇತ್ತಿಚಿನ ದಿನಗಳಲ್ಲಿ ಎಲ್ಲರೂ ಹಣದ ದಾಹಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇರೆಯವರನ್ನು ಬೇಡುವ ಸ್ಥಿತಿ ಬಾರದಷ್ಟು ಹಣ ಇದ್ದರೆ ಸಾಕು. ಮುಂದಿನ ತಲೆಮಾರಿಗೆ ಕೂಡಿಡುವ ಗುಣವನ್ನು ರೂಢಿಸಿಕೊಳ್ಳಬಾರದು ಎಂದು ಮಕ್ಕಳ ಕೂಟದ ಅಧ್ಯಕ್ಷರಾದ ಕೆ.ಮೋಹನದೇವ್ ಆಳ್ವ ಮಕ್ಕಳಿಗೆ ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net