

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕೃಷಿ ಭೂಮಿ ಸ್ವಾಧೀನ ವಿರೋಧಿ ಹೋರಾಟ 944 ದಿನ ಪೂರೈಸಿದ್ದು, ಸಾವಿರದ ದಿನದ ಸಹಿನದಲ್ಲಿದೆ. ಆದರೂ ಸರ್ಕಾರ ರೈತರ ಹೋರಾಟಕ್ಕೆ ಕವಡೆ ಕಿಮ್ಮತ್ತೂ ಕೊಡುತ್ತಿಲ್ಲ.
ಕಳೆದ ತಿಂಗಳು ರೈತರ ನಿಯೋಗ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿತ್ತು, ವಿವಿಧ ರೈತಪರ ಸಂಘಟನೆಗಳು ರೈತ ಮುಖಂಡರು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಕೈಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು. ಅಕ್ಟೋಬರ್ ಅಂತ್ಯದೊಳಗೆ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ದೊರಕಿಸಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಇದೆಲ್ಲವೂ ಸುಳ್ಳು ಭರವಸೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು ರೈತರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.
ಚುನಾವಣಾ ನಾಟಕ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ಬದಲಾದಾಗ ರೈತರು ತಮ್ಮ ಬದುಕಿನಲ್ಲಿ ಬೆಳಕು ಕಾಣುವ ನಿರೀಕ್ಷೆಯಲ್ಲಿದ್ದರು. ಆದರೆ, ಸರ್ಕಾರಗಳು ಯಾವುದಾದರೊಂದು ನೆಪ ಹೇಳುತ್ತಾ ದಿನ ದೂಡುತ್ತಿವೆ. ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಲಾಗಿತ್ತು. ಆಗ ಜಿಲ್ಲಾಡಳಿತವೇ ರೈತರ ಮುಂದೆ ಬಂದು ಚುನಾವಣೆ ಮುಗಿದ ತಕ್ಷಣ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಗೋಗರೆತ್ತು. ಆದಾದ ಬಳಿಕ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಇದೆಲ್ಲ ಚುನಾವಣೆ ಸಂದರ್ಭದಲ್ಲಿ ನಡೆಯುವ ನಾಟವಷ್ಟೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕರಾಳ ದೀಪಾವಳಿ: ಎಲ್ಲರಿಗೂ ಈ ದೀಪಾವಳಿ ಬೆಳಕಿನ ಹಬ್ಬವಾದರೆ, ಮೂರು ವರ್ಷಗಳಿಂದ ಕಾದುಕುಳಿತಿರುವ ಚನ್ನರಾಯಪಟ್ಟಣ ರೈತರಿಗೆ ಮಾತ್ರ ಕಗ್ಗತ್ತಲ ಕರಾಳ ದಿನವಾಗಿಯೆ ಮುದುವರೆದಿದೆ. ರೈತರು ಇಂದು ಕರಾಳ ದೀಪಾವಳಿ ಆಚರಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಲು ಬಯಸುತ್ತೇವೆ ಎಂದು ರೈತ ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದು ವಾಮನ ಬಲಿಯನ್ನು ಕೊಂದಂತೆ, ಇಂದು ದುರಾಸೆಯ ದುಷ್ಟ ಸರ್ಕಾರಗಳು ರೈತರನ್ನು ಕೊಲ್ಲುತ್ತಿವೆ, ನಮ್ಮ ಸರ್ಕಾರ, ಬಂಡವಾಳಶಾಹಿಗಳ ಪರವಾಗಿ ನಿಂತು ರೈತರನ್ನು ಕೊಲ್ಲುತ್ತಿದೆ. ಎಲ್ಲ ಕಾಲದಲ್ಲಿಯೂ ಬಲಿಯಾಗುವವರು ಮಾತ್ರ ರೈತರು ಶ್ರಮಿಕ ವರ್ಗದವರೆ ಎಂಬುದು ನೋವಿನ ಸಂಗತಿ ಎಂದು ಹೋರಾಟಗಾರರು ಅಳಲು ತೋಡಿಕೊಂಡಿದ್ದಾರೆ.
ಹೋರಾಟ ತೀವ್ರತೆ: ಈ ಹೋರಾಟವು ಕೇವಲ ಭೂಮಿಯದ್ದಲ್ಲ, ಇದು ನಮ್ಮ ಅಸ್ತಿತ್ವದ ಹೋರಾಟ ಎಂದು ರೈತರು ಹೇಳುತ್ತಿದ್ದಾರೆ. ಸರ್ಕಾರ ಯಾವುದೇ ಕುತಂತ್ರ ಮಾಡಿದರೂ ರೈತರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ, ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ದಿನೆ ದಿನೇ ತೀವ್ರಗೊಳಿಸುವುದಾಗಿ ರೈತರು ಎಚ್ಚರಿಸಿದ್ದಾರೆ. ರೈತ ಸಮುದಾಯ ತಿರುಗಿ ಬೀಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗುವುದೋ, ರೈತ ಹೋರಾಟ ಯಾವ ಸ್ವರೂಪ ಪಡೆಯಲಿದೆಯೋ ಎಂಬುದು ಕಾದು ನೋಡಬೇಕಿದೆ.