

ಮಂಡ್ಯ: ಅನಾಮಧೇಯ ವ್ಯಕ್ತಿಯೊಬ್ಬ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಹೆಸರಿನಲ್ಲಿ ನ.11ರಂದು ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಓಟದ ಸರ್ಧೆ ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾನೆ ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷರೂ ಆದ ಪುರಸಭಾ ಮಾಜಿ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.
ವಿಜೇತರಿಗೆ ಲಕ್ಷಾಂತರ ರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಸ್ಫರ್ಧೆ ಎಲ್ಲಿ ಆಯೋಜನೆ ಎನ್ನುವ ಮಾಹಿತಿ ಇಲ್ಲ. ಬದಲಿಗೆ ಮೊಬೈಲ್ ಸಂಖ್ಯೆ ಮಾತ್ರ ನೀಡಲಾಗಿದೆ. ಯಾವುದೇ ಕಚೇರಿ ವಿಳಾಸ ನೀಡಿಲ್ಲ. ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮಾಹಿತಿ ನೀಡಿ ಹಣ ಲಪಟಾಯಿಸುವ ಹುನ್ನಾರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಮುಂಗಡವಾಗಿ 3,500 ರೂ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರು ಎಚ್ಚರವಹಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಡಾ.ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಈ ರೀತಿಯ ಯಾವುದೇ ಸ್ಪರ್ಧೆಯನ್ನು ಅಭಿಮಾನಿ ಬಳಗದ ವತಿಯಿಂದ ನಡೆಸಲಾಗುತ್ತಿಲ್ಲ. ಬಾಗಲಕೋಟೆಯ ಮೂಲದ ಕಿಡಿಗೇಡಿ ಈ ಕೃತ್ಯವೆಸಗತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಡಾ.ರಾಜ್‌ಕುಮಾರ್ ಕುಟುಂಬದ ಅಭಿಮಾನಿಗಳು ವಂಚನೆಗೆ ಒಳಗಾಗಬಾರದು. ಅಂತೆಯೇ ಸ್ಪರ್ಧೆ ಆಯೋಜಕರ ವಿರುದ್ಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ವಿವರಿಸಿದರು.
ರಾಶಿರಾಪು ಸಂಘಟನೆ ಅಧ್ಯಕ್ಷ ಎಂ.ಸಿ.ಕೃಷ್ಣ, ಮಂಜುನಾಥ್, ಸೋಮಣ್ಣ, ಮಂಜು ಇದ್ದರು.