

ಮೈಸೂರು: ಸಂಸ್ಕೃತಿ, ಪರಂಪರೆ, ಕಲೆಗೆ ಹೆಸರಾಗಿರುವ ಮೈಸೂರಿನಲ್ಲಿ ಸುಸಜ್ಜಿತ ಕಲಾಗ್ಯಾಲರಿ ನಿರ್ಮಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸುವುದಾಗಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.
ಮೈಸೂರು ಕಲಾ ಗ್ಯಾಲರಿ, ಕನ್ನಡ ಸಾಹಿತ್ಯ ಕಲಾಕೂಟದಿಂದ ಜೆಎಸ್‌ಎಸ್ ಶ್ರೀ ರಾಜೇಂದ್ರ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ನೂರರ ನೆನಪು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜರ ಕಾಲದಿಂದಲೂ ಮೈಸೂರಿನಲ್ಲಿ ಕಲೆ, ಸಂಸ್ಕೃತಿ, ಪರಂಪರೆಗೆ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ. ಸರ್ಕಾರ ಬಂದ ಮೇಲೂ ಸಾಕಷ್ಟು ಕಾರ್ಯಗಳು ಅಗಿವೆ ಎಂದರು.
ಆದರೆ ನಗರದಲ್ಲಿ ಸುಸಜ್ಜಿತ ಕಲಾ ಗ್ಯಾಲರಿ ಇಲ್ಲ ಎನ್ನುವ ನೋವು ಕಲಾವಿದರಲ್ಲಿದೆ. ಹಾಗಾಗಿ ಕಲಾ ಗ್ಯಾಲರಿ ನಿರ್ಮಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಈ ಮೂಲಕ ಕಲಾವಿದರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಕಾರ್ಯವನ್ನು ಆರಂಭ ಮಾಡುವುದು ಸುಲಭ. ಅದನ್ನು ಸತತವಾಗಿ ಮುಂದುವರಿಸಿಕೊಂಡು ಹೋಗುವುದು ತ್ರಾಸದಾಯಕ ವಿಷಯ. ಆದರೆ ಪ್ರತಿ ತಿಂಗಳು ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಕಲಾವಿದ ಶಿವಲಿಂಗಪ್ಪ ಅವರು, ಸಾಧಕರನ್ನು ಆಹ್ವಾನಿಸಿ ಸಂವಾದ ನಡೆಸಿಕೊಂಡು ಬರುತ್ತಿರುವುದು ಮೆಚ್ಚುವ ಸಂಗತಿ ಎಂದರು.
ಸಮಾಜದಲ್ಲಿ ಸಾಕಷ್ಟು ಜನರು ಯಾವುದೇ ಪ್ರಚಾರ, ಅಬ್ಬರ ಇಲ್ಲದೆ ತಮ್ಮಷ್ಟಕ್ಕೆ ತಾವು ಸೇವಾ ಕಾರ್ಯ ಮಾಡಿಕೊಂಡು ಹೋಗುತ್ತಿರುತ್ತಾರೆ. ಅಂತಹವರನ್ನು ಗುರುತಿಸಿ ಗೌರವಿಸಲಾಗಿದೆ. ಇದರಿಂದ ಅವರಿಗೆ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ ದೊರೆತಂತಾಗುತ್ತದೆ ಎಂದು ಹೇಳಿದರು.
ಮೈಸೂರು ಆರ್ಟ್ ಗ್ಯಾಲರಿ ಸ್ಥಾಪಕ ಅಧ್ಯಕ್ಷರೂ ಆದ ಕಲಾವಿದ ಎಲ್.ಶಿವಲಿಂಗಪ್ಪ ಮಾತನಾಡಿ, ಭವ್ಯ ಪರಂಪರೆಯನ್ನು ಕಂಡಿರುವ ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಅಧ್ಯಯನ ಸಂಸ್ಥೆ ಇದ್ದರೂ ಅದಕ್ಕೊಂದು ಶಾಶ್ವತ ಜಾಗ ನೀಡಲು ನಮ್ಮ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹಾಗೆಯೇ ಕಲೆಗೆ ಹೆಸರಾದ ಊರಿನಲ್ಲಿ ವ್ಯವಸ್ಥಿತ ಕಲಾಗ್ಯಾಲರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
2014ರಿಂದ 2024ರ ವರೆಗೆ ನಮ್ಮ ಕಲಾ ಗ್ಯಾಲರಿಯಲ್ಲಿ ಪ್ರತಿ ತಿಂಗಳು ಸಾಧಕರನ್ನು ಆಹ್ವಾನಿಸಿ ಸಂವಾದ ನಡೆಸಲಾಗಿದೆ. ಈಗ ನೂರು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದು, ಸಾಧಕರ ಕುರಿತ ಕಿರು ಮಾಹಿತಿಯ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ. ಮುಂದೆ ಅವರ ಕುರಿತು ಪೂರ್ಣ ಮಾಹಿತಿ ನೀಡುವ ಪುಸ್ತಕವನ್ನು ಹೊರತರುವ ಮೂಲಕ ದಾಖಲೀಕರಣ ಮಾಡಲಾಗುವುದು ಎಂದು ಹೇಳಿದರು.
ಕೈಪಿಡಿ ಬಿಡುಗಡೆಗೊಳಿಸಿದ ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಸಿ.ನಾಗಣ್ಣ ಮಾತನಾಡಿ, ಯಾವುದೇ ನೆರವಿಲ್ಲದೆ ಶಿವಲಿಂಗಪ್ಪ ಅವರು ಕಲಾಗ್ಯಾಲರಿ, ಸಾಧಕರ ಸಂವಾದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸಾಧಕರ ಕುರಿತು ದಾಖಲೀಕರಣ ಕೂಡ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ದೇವಿಕಾ ಮಾತನಾಡಿ, ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ತನ್ನೊಳಗೆ ಸೆಳೆದುಕೊಳ್ಳುತ್ತಿದೆ. ಅಂತಹ ಸೆಳೆತಕ್ಕೆ ಒಳಗಾಗಿರುವ ಶಿವಲಿಂಗಪ್ಪ ಅವರು ತಮ್ಮ ಮನೆಯನ್ನೇ ಗ್ಯಾಲರಿ ಮಾಡಿಕೊಂಡು ಉಚಿತ ಸೇವೆ ಮಾಡುತ್ತಿರುವುದು ಅವರ ಕಾಲಾವಂತಿಕೆಗೆ ಹಿಡಿದ ಕನ್ನಡಿ ಎಂದು ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಮೈಸೂರು ಕಲಾ ಗ್ಯಾಲರಿಯ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ ಇದ್ದರು. ಲೇಖಕಿ ಶ್ರೀಮತಿ ಹರಿಪ್ರಸಾದ್, ಕಿಕ್ಕೇರಿ ನಾರಾಯಣ ಸಾಧಕರ ಪರವಾಗಿ ಮಾತನಾಡಿದರು.