

ಸಿಂಧನೂರು: ಮಾಜಿ ಸಂಸದ ಉಗ್ರಪ್ಪ ಅವರು ಸಮಾಜದ ಶಾಂತಿ ಕದಡುವಂಥ ಹೇಳಿಕೆ ನೀಡಿರುವುದು ಖಂಡನೀಯ. ಇದಕ್ಕೆ ಸಿಎಂ ಸಿದ್ದರಾಮಯ್ಯ ದಯನೀಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಬ್ಬರು ಕಾಂಗ್ರೆಸ್ ನಾಯಕರು ವೇದಿಕೆ ಮೇಲೆ ಕುರುಬ ಸಮಾಜದ ಕುರಿತು ಹೇಳಿಕೆ ನೀಡುವುದು ರಾಜಕೀಯ ಪ್ರೇರಿತವಾಗಿದೆ. ಕುರುಬ ಸಮುದಾಯ ಮೊದಲಿನಿಂದ ಎಸ್ಟಿ ಮೀಸಲಾತಿ ಕೇಳುತ್ತಿದೆ. ಆದರೆ, ಸರ್ಕಾರ ಮೀಸಲಾತಿ ನೀಡಿದರೂ ನಾಯಕ ಸಮುದಾಯದ ಮೀಸಲಾತಿಯಡಿ ಸೇರಿಸದೇ ಪ್ರತ್ಯೇಕ ಮೀಸಲಾತಿ ನೀಡಿದರೆ ಒಪ್ಪಿಗೆ ನೀಡುತ್ತಿದ್ದೇವೆ. ದೇಶದ ಸಂಪತ್ತಿನಲ್ಲಿ ಎಲ್ಲರಿಗೂ ಪಾಲು ಇರುವುದರಿಂದ ನಮ್ಮ ಪಾಲು ಕೇಳುತ್ತಿದ್ದೇವೆ. ಆದರೆ, ಮಾಜಿ ಸಂಸದ ಉಗ್ರಪ್ಪ ಅವರು ಕುರುಬರು ನಮ್ಮ ತಟ್ಟೆಯಲ್ಲಿನ ಅನ್ನ ಕಸಿಯುತ್ತಿದ್ದಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ತಿಳಿಸಿದರು.
ಸಿಂಧನೂರು ದಸರಾ ಉತ್ಸವದಲ್ಲಿ ಡಾ.ಅಂಬೇಡ್ಕರ್ ಸ್ತಬ್ಧಚಿತ್ರ ಮೆರವಣಿಗೆ ಮಾಡದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ದಸರಾ ಧಾರ್ಮಿಕ ಆಚರಣೆಯಾಗಿದ್ದು, ಸ್ತಬ್ಧಚಿತ್ರ ಮೆರವಣಿಗೆ ಕುರಿತಂತೆ ಸಲಹೆ ನೀಡಬಹುದಿತ್ತು. ಆದರೆ, ಎಲ್ಲದಕ್ಕೂ ಹೋರಾಟ ಮಾಡುವುದು ಸರಿಯಲ್ಲ ಎಂದರು. ಅತಿಯಾದ ಮಳೆಯಿಂದಾಗಿ ನಷ್ಟವಾದ ಒಣ ಬೇಸಾಯ ಭಾಗದ ರೈತರಿಗೆ ಹೆಚ್ಚಿನ ಬೆಳೆ ಪರಿಹಾರ ನೀಡಬೇಕು. ಈಗ ಸರ್ಕಾರ ನಿರ್ಧರಿಸಿದಂತೆ ಪ್ರತಿ ಹೆಕ್ಟೇರ್‌ಗೆ 17 ಸಾವಿರ ರೂ. ಹಾಗೂ ನೀರಾವರಿಗೆ 25 ಸಾವಿರ ರೂ. ಪರಿಹಾರ ಘೋಷಿಸಿದ್ದು, ತಾರತಮ್ಯ ನೀತಿಯಾಗಿದೆ. ಒಣ ಬೇಸಾಯಕ್ಕೂ 25 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು.