

ಶಿರಸಿ: ಮಾಜಿ ಸಂಸದ ಅನಂತಕುಮಾರ ಹೆಗಡೆ ಮನೆ ಕೋಣೆಗೆ ಬೆಂಕಿ ತಗುಲಿ ಹಾನಿ ಸಂಭವಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಇಲ್ಲಿಯ ಕೆಎಚ್ಬಿ ಕಾಲನಿಯಲ್ಲಿರುವ ಅನಂತಕುಮಾರ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಹಡಿಯಲ್ಲಿದ್ದ ವ್ಯಾಯಾಮ ಕೋಣೆಯಲ್ಲಿ ನಸುಕಿನ 4 ಗಂಟೆ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಅಗ್ನಿ ಅವಘಡ ಸಂಭವಿಸಿದೆ. ಇದರಿಂದಾಗಿ ಲಕ್ಷಾಂತರ ರೂ. ಬೆಲೆಯ ವ್ಯಾಯಾಮ ಸಲಕರಣೆಗಳು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ವೇಳೆ ಅನಂತಕುಮಾರ ಹೆಗಡೆ ಮತ್ತು ಕುಟುಂಬದವರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ.