ರಾಜಕೀಯ ವಲಯದಲ್ಲಿ ಟೀಕೆ, ವಿಮರ್ಶೆ ಸಾಮಾನ್ಯ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಹೇಳಿಕೆ

Former MLC KT Srikanthegowda press conference Mandya
Published on

ಮಂಡ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರುವವರಿಗೆ ತಾಳ್ಮೆ, ಜವಾಬ್ದಾರಿ ಬಹಳ ಮುಖ್ಯ. ಟೀಕೆ-ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಾಳ್ಮೆ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರರ ಮುಖ್ಯಸ್ಥರೂ ಆದ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಟೀಕೆ ಮತ್ತು ವಿಮರ್ಶೆಗಳು ಅನಿವಾರ್ಯ. ಆಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿರಲು ಸಾಧ್ಯ. ಟೀಕೆಗಳು, ವಿಮರ್ಶೆಗಳನ್ನು ಅರ್ಥಪೂರ್ಣವಾಗಿ ಸ್ವೀಕರಿಸಿ ಹೆಜ್ಜೆ ಇಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಪ್ರತಿಪಕ್ಷದ ಸ್ಥಾನದಲ್ಲಿರುವ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರ ಬಗ್ಗೆ ಸಚಿವ ಚಲುವರಾಯಸ್ವಾಮಿ ಹಗುರವಾಗಿ ಮಾತನಾಡುವುದು ಶೋಭೆಯಲ್ಲ. ಈಗಲಾದರೂ ತಾಳ್ಮೆ ಕಳೆದುಕೊಳ್ಳುವ ನಡವಳಿಕೆಗೆ ತಿಲಾಂಜಲಿ ಹೇಳಿ. ಪ್ರತಿಪಕ್ಷದವರು ನಿಡುವ ಎಚ್ಚರಿಕೆಯನ್ನು ಮಾರ್ಗದರ್ಶನವೆಂದು ತಿಳಿದು ಹೆಜ್ಜೆ ಇಡಿ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಿದ್ದಾರೆ. ಈಗ ಕೇಂದ್ರದ ಮುಂದೆ ಪ್ರಸ್ತಾವನೆ ಇಡುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಮೇಕೆದಾಟು ಯೋಜನೆಗೆ ಎಚ್‌ಡಿಕೆ ಅನುಮತಿ ಕೊಡಿಸಲಿ ಎನ್ನುವ ಕಾಂಗ್ರೆಸ್ ನಾಯಕರು, ದೆಹಲಿಯಲ್ಲಿ ಕರ್ನಾಟಕದ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿದಾಗ ಏಕೆ ಮೇಕೆದಾಟು ಯೋಜನೆ ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದರು.

ನಗರಸಭೆ ಮಾಜಿ ಸದಸ್ಯ ಬೋರೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ.ಸ್ವಾಮಿಗೌಡ, ಎಸ್ಸಿ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್.ತುಳಸೀಧರ್, ಹನಕೆರೆ ನಾಗಪ್ಪ, ಸಾತನೂರು ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net