

ಗಂಗಾವತಿ: ತಾಲೂಕಿನ ಮಲ್ಲಾಪುರ-ಸಿದ್ದಿಕೇರಿ ಬೆಟ್ಟದ ಮಧ್ಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ವಾಣಿ ಭದ್ರೇಶ್ವರ ದೇವಾಲಯಕ್ಕೆ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನೇತೃತ್ವದ ಭಕ್ತರ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.
ದೇವಾಲಯದಲ್ಲಿನ ಪಾಣಿಬಟ್ಟಲು ಮೇಲಿದ್ದ ಮೂರ್ತಿ ಕಳವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ. ದೇವಾಲಯದಲ್ಲಿ ಮೂರ್ತಿ ಮರುಪ್ರತಿಷ್ಠಾಪನೆಗಾಗಿ ಭಕ್ತರೊಂದಿಗೆ ಚರ್ಚೆ ನಡೆದಿದ್ದು, ಐತಿಹಾಸಿಕ ಹಿನ್ನೆಲೆಯ ಮರುಸ್ಪರ್ಶಕ್ಕಾಗಿ ಕೈಗೊಳ್ಳಬೇಕಿರುವ ಸಂಪ್ರದಾಯಗಳ ಬಗ್ಗೆ ಮಾತುಕತೆ ನಡೆಸಲಾಯಿತು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಐತಿಹಾಸಿಕ ಹಿನ್ನೆಲೆಯ ದೇವಾಲಯಕ್ಕೆ ಧಕ್ಕೆಯಾಗಿದ್ದು ನೋವಾಗಿದೆ. ಆ. 30ರಂದು ಮರುಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೇವಾಲಯ ಸಮಿತಿ ಮತ್ತು ಸಮಸ್ತ ಭಕ್ತರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು. ದೇವಾಲಯ ಮತ್ತು ಸ್ಮಾರಕಗಳ ರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಲಿ ಎಂದರು.
ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಎಪಿಎಂಸಿ ಮಾಜಿ ಸದಸ್ಯ ಚಂದ್ರಶೇಖರ್ ಅಕ್ಕಿ, ಪಂಪಾನಗರ ಗೃಹ ನಿರ್ಮಾಣದ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಉದ್ಯಮಿ ಸಿಂಗನಾಳ ಸುರೇಶ ಇತರರಿದ್ದರು.