ಮೂರೇ ದಿನದಲ್ಲಿ ದಾಖಲೆ ಸೃಷ್ಟಿಸಿದ ಕಾಂಗ್ರೆಸ್: ಮಾಜಿ ಶಾಸಕ ಸುರೇಶ್‌ಗೌಡ ಟೀಕಾಪ್ರಹಾರ

Sureshgowda mandya
Published on

ಮಂಡ್ಯ: ಹನುಮಾನ್ ಧ್ವಜ ತೆಗೆಯಲು ಅಧಿಕಾರಿಗಳು ಈಗ ಸಮಾಜಾಯಿಷಿ ಕೊಡುತ್ತಿದ್ದಾರೆ. ಇನ್ನು ಈಗ ಬಹಿರಂಗಪಡಿಸುತ್ತಿರುವ ದಾಖಲೆ ಕೇವಲ ಮೂರು ದಿನದಲ್ಲಿ ಸೃಷ್ಟಿಸಿರುವುದಾಗಿದೆ. ದಾಖಲೆಗಳಲ್ಲಿ ಅಕ್ಷರ ತಿದ್ದುಪಡಿ ಮಾಡಲಾಗಿದೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದರು.

ಗ್ರಾಪಂ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಶಾಸಕರ ಜವಾಬ್ದಾರಿ ಏನು, ಸಮಸ್ಯೆ ಸರಿಪಡಿಸುವ ಕೆಲಸ ಏಕೆ ಮಾಡಿಲ್ಲ. ಈ ವಿಚಾರದಲ್ಲಿ ಜಿಲ್ಲಾಡಳಿತ ತಪ್ಪು ಮಾಡಿದೆ. ಸುಳ್ಳು ಪತ್ರಗಳನ್ನ ಸೃಷ್ಟಿ ಮಾಡಿದ್ದಾರೆ. ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್‌ನವರಿಗಿಂತ ಹೆಚ್ಚು ನಾವು ಗೌರವ ಕೊಡುತ್ತೇವೆ. ಯಾವ ಕಾನೂನುನಲ್ಲಿ 3 ಗಂಟೆಗೆ ರಾಷ್ಟ್ರಧ್ವಜ ಹಾರಿಸುತ್ತಾರೆ. ರಾಷ್ಟ್ರಧ್ವಜಕ್ಕೆ ಗೌರವ ಕೊಡಬೇಕಾದ ಗೌರವ ಕೊಟ್ಟಿದ್ದಾರಾ?. ರಾಷ್ಟ್ರಗೀತೆಯನ್ನು ಹಾಡಿಲ್ಲ, ಇದು ಅಪರಾಧ. ಗ್ರಾಪಂ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆ. ಆದರೆ ವಿವಾದದಲ್ಲಿ ಬಡಪಾಯಿ ಪಿಡಿಒನನ್ನು ಅಮಾನತು ಮಾಡಿದ್ದಾರೆ. ನಿಜವಾಗಿಯೂ ಡಿಸಿ, ಜಿಪಂ ಸಿಇಒ ಅವರನ್ನು ಅಮಾನತು ಮಾಡಬೇಕಿತ್ತು ಎಂದು ಹೇಳಿದರು.

ಧರ್ಮದ ಮೇಲೆ ರಾಜಕಾರಣ ಮಾಡುವ ಅವಶ್ಯಕತೆ ಜೆಡಿಎಸ್‌ಗೆ ಬಂದಿಲ್ಲ. ಕಾಂಗ್ರೆಸ್‌ನ ಒಳ ಬಣದಿಂದ ಈ ಸಮಸ್ಯೆ ಉದ್ಭವವಾಗಿದೆ. ಇದನ್ನು ಮೊದಲು ರವಿಕುಮಾರ್ ಗಣಿಗ ತಿಳಿದುಕೊಳ್ಳಬೇಕಿದೆ. ರವಿಕುಮಾರ್ ನನ್ನ ಸ್ನೇಹಿತ, ಆದರೆ ಹುಚ್ಚುಚ್ಚಾಗಿ ಆಡುತ್ತಾರೆ. ಇಂದು ಕಾಂಗ್ರೆಸ್ ಜಾತ್ಯಾತೀತವಾಗಿದ್ಯಾ?. ಯಾರನ್ನ ಒಲಿಸಿಕೊಳ್ಳಲು ಏನು ಮಾಡುತ್ತಿದ್ದೀರಿ?. ಇಂಟಲಿಜೆನ್ಸ್ ಮಾಹಿತಿ ಕೊಟ್ಟಿರಲಿಲ್ಲವೇ?. ರಾತ್ರೋರಾತ್ರಿ ಧ್ವಜ ಇಳಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು.

ಧ್ವಜ ಸ್ತಂಭ ಇವತ್ತಿನ ಕಾಲದಲ್ಲ, ಹಿಂದೆ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ಮಾಡಿದ್ದಾರೆ. ಜನರ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ಮಾಡಿದೆ. ಸಚಿವರು, ಶಾಸಕರು, ಅಧಿಕಾರಿಗಳೇ ಸಮಸ್ಯೆ ಬಗೆಹರಿಸಿದ್ದರೆ ಜೆಡಿಎಸ್, ಬಿಜೆಪಿ ಏಕೆ ಬರುತ್ತಿದ್ದರು. ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ ಬೆಳೆಯುತ್ತೇನೆಂದು ಚಲುವರಾಯಸ್ವಾಮಿ ಅಂದುಕೊಂಡಿದ್ದಾರೆ. ನನ್ನನ್ನು ಯಾರೆಂದು ಪ್ರಶ್ನಿಸುತ್ತಾರೆ. ನಾಗಮಂಗಲ ಕ್ಷೇತ್ರದಲ್ಲಿ ನಿಮ್ಮನ್ನು ಸೋಲಿಸಿದವನೇ ನಾನೇ ಎನ್ನುವುದನ್ನು ಇತಿಹಾಸ ಹೇಳುತ್ತದೆ ಎಂದು ವಾಗ್ದಾಳಿ ನಡೆಸಿದರು.

ಬೆಳ್ಳೂರು, ಮದ್ದೂರು ಸೇರಿದಂತೆ ಹಲವೆಡೆ ಯಾವ ಲಾಡ್ಜ್‌ನಲ್ಲಿ ಇಸ್ಪಿಟ್, ಅನೈತಿಕ ಚಟುವಟಿಕೆ ನಡೆಸುತ್ತಿದ್ದಿರಾ?. 10 ತಿಂಗಳಲ್ಲಿ ಯಾವ ಅನುದಾನ ತಂದಿದ್ದಿರಿ?. ಸುಳ್ಳು ದಾಖಲೆ ಸೃಷ್ಟಿಸಿ ಬಹುಸಂಖ್ಯಾತ ಜನರ ಮನಸ್ಸು ನೋವುಂಟು ಮಾಡಿದ್ದಿರಿ. ತಪ್ಪು ಮಾಡಿದ್ದೀರಿ, ಆದ್ದರಿಂದ ಕ್ಷಮೆ ಕೇಳಿ ಎಂದು ಒತ್ತಾಯಿಸಿದ ಅವರು, ಬಿಜೆಪಿ ಮತ್ತು ಜೆಡಿಎಸ್ ತೀರ್ಮಾನ ಮಾಡಿ ರಾಜಕಾರಣರಹಿತ ಪ್ರತಿಭಟನೆ ಮಾಡಿದ್ದೇವೆ. ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ ಅವರ ಮೂಳೆಯನ್ನು ಪೊಲೀಸರು ಮುರಿದಿದ್ದಾರೆ. ಈ ರೀತಿಯ ಘಟನೆಗಳು ನಡೆಯಬಾರದು. ನಮ್ಮದು ಜನ ಪರ ಇರುವ ಪಕ್ಷ. ಬಿಜೆಪಿ ಮತ್ತು ಜೆಡಿಎಸ್ ಸೇರಿ ಭ್ರಷ್ಟ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಅನ್ನು ನಿರ್ನಾಮಾ ಮಾಡಲು ಬಂದಿದ್ದೇವೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net