

ಶ್ರೀರಂಗಪಟ್ಟಣ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಜನ್ಮ ದಿನವನ್ನು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.
ತಾಲೂಕಿನ ಸ್ವಗ್ರಾಮ ಅರಕೆರೆ ಸಮೀಪದ ಹುಂಜನಕೆರೆ ರಸ್ತೆಯ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ರೀತಿಯ ವಿಶೇಷ ಹೂ ಮಾಲೆಗಳು ಹಾಗೂ ದೊಡ್ಡ ಕೇಕ್‌ಗಳೊಂದಿಗೆ ಆಗಮಿಸಿ ನೆಚ್ಚಿನ ನಾಯಕನಿಗೆ ಸನ್ಮಾನಿಸಿ ಅವರಿಂದ ಕತ್ತರಿಸುವ ಮೂಲಕ ಶುಭಕೋರಿ ಸಂಭ್ರಮಿಸಿದರು.
ತಾಯಿ ಹಾಗೂ ಮಾಜಿ ಶಾಸಕಿ ಪಾರ್ವತಮ್ಮ ಶ್ರೀಕಂಠಯ್ಯ, ಪತ್ನಿ ಗೀತಾ ರವೀಂದ್ರ, ಪುತ್ರ ದೇವಾನಂಪ್ರಿಯ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಕೆರೆ ಮರೀಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ದಶರಥ ಸಮ್ಮುಖದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೃಹತ್ ಕೇಕ್ ಕತ್ತರಿಸಿದರು. ರವೀಂದ್ರ ಶ್ರೀಕಂಠಯ್ಯ ಅವರಿಗೆ ಅಭಿಮಾನಿ ರಾಂಪುರ ಗ್ರಾಮದ ಯುವ ಮುಖಂಡ ಪ್ರೀತಮ್ ರಾಮ್ ಪೇಟ ತೊಡಿಸಿ, ಬೃಹತ್ ಸೇಬಿನ ಹಾರ ಹಾಕುವ ಜತೆಗೆ ಹಲವು ಬಗೆಯ ಸುಮಾರು 120 ಕೆಜಿ ವಿಶೇಷ ಹೂಗಳಿಂದ ಪುಷ್ಪವೃಷ್ಟಿ ನೆರವೇರಿಸಿ ಶುಭಕೋರುವ ಮೂಲಕ ಗಮನಸೆಳೆದರು.
ಜೆಡಿಎಸ್ ಯುವ ಮುಖಂಡರಾದ ಗೌತಮ್ ಮರೀಗೌಡ, ಕಡತನಾಳು ಸಂಜಯ್, ಚಿಂದಗಿರಿಕೊಪ್ಪಲು ಹರ್ಷವರ್ಧನ, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ಶಂಕರ್ ಇತರರು ಇದ್ದರು.