

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಪ್ರಸ್ತುತ 17.5 ಟಿಎಂಸಿ ನೀರು ಲಭ್ಯವಿದೆ. ಆದರೂ ಜಿಲ್ಲೆಯ ರೈತರ ಜಮೀನಿಗೆ ನೀರು ಹರಿಸದ ಪರಿಣಾಮ ಕಬ್ಬು, ತೆಂಗು ಹಾಗೂ ಅಡಿಕೆ ಬೆಳೆ ನಾಶವಾಗಿದೆ. ಇದರಿಂದ ಪ್ರತಿ ರೈತ ಕುಟುಂಬಕ್ಕೆ ಸುಮಾರು 2 ಲಕ್ಷ ರೂ ನಷ್ಟವಾಗಿದ್ದು, ರಾಜ್ಯಸರ್ಕಾರ ಇದರ ಹೊಣೆ ಹೊರಲಿದೆಯೇ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
ತಾಲೂಕಿನ ಕೊತ್ತತ್ತಿ ಹೋಬಳಿ 2ನೇ ವೃತ್ತದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರಸವಾಡಿ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಎಚ್‌ಡಿಕೆ ಅವರ ಪರ ಮತಯಾಚಿಸಿದ ಅವರು, ರಾಜ್ಯ ಸರ್ಕಾರ ಜಿಲ್ಲೆಯ ರೈತರ ಬದುಕನ್ನು ಸಂಪೂರ್ಣ ನಾಶ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರಾಜ್ಯದ ಜನರಿಗೆ ಅನ್ಯಾಯವೆಸಗುತ್ತಿದೆ. ಮಾತ್ರವಲ್ಲದೆ ಚುನಾವಣೆಯಲ್ಲಿ ಹಣವಂತರು ಹಾಗೂ ದಂಧೆಕೋರರಿಗೆ ಮಣೆ ಹಾಕಿದೆ. ಈ ಮೂಲಕ ಮಂಡ್ಯ ಜಿಲ್ಲೆಯ ರಾಜಕೀಯ ಕ್ಷೇತ್ರದ ಮಾರ್ಯಾದೆಗೆ ಭಂಗ ತರಲಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಪ್ರತಿ ತಿಂಗಳು ಎರಡರಿಂದ ಮೂರು ಸಾವಿರ ರೂ ಪ್ರತಿ ಕುಟುಂಬಕ್ಕೆ ಸಿಗುತ್ತಿರಬಹುದು. ಆದರೆ ಪರೋಕ್ಷವಾಗಿ ಪ್ರತಿ ಕುಟುಂಬದಿಂದ 10 ಸಾವಿರ ರೂ ಕಸಿಯಲಾಗುತ್ತಿದೆ. ಆರ್‌ಟಿಸಿ, ಮುದ್ರಾಂಕ ಶುಲ್ಕ, ಛಾಪಾ ಕಾಗದ, ಟಿಸಿ ಅಳವಡಿಕೆಗೆ ಅಧಿಕ ಹಣ ವಸೂಲಿ ಮಾಡಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಮದ್ಯದ ಬೆಲೆ ಏರಿಕೆ ಮಾಡಿ ತಾಯಂದಿರ ಹಣವನ್ನು ಗಂಡಸರ ಮೂಲಕ ಕಸಿದುಕೊಳ್ಳುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದ ಪರ ಅಲೆ ಸೃಷ್ಠಿಯಾಗಿದೆ. ನರೇಂದ್ರ ಮೋದಿ ಅವರು ಮತ್ತೇ ದೇಶದ ಪ್ರಧಾನಿಯಾಗಲು, ಅವರ ಸಂಪುಟದಲ್ಲಿ ಎಚ್‌ಡಿಕೆ ಸಚಿವರಾಗಲು ಜಿಲ್ಲೆಯ ಜನರು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಮಂಡ್ಯ ಜಿಲ್ಲೆ ರಾಷ್ಟ್ರದ ಗಮನ ಸೆಳೆದಿದೆ. ಮೋದಿ ಅವರು ಮರಳಿ ಪ್ರಧಾನಿ ಗದ್ದುಗೆ ಏರಲು ಮೈತ್ರಿ ಅಭ್ಯರ್ಥಿಯನ್ನು ಹೆಚ್ಚು ಬಹುಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆ ಮಾಡಬೇಕು. ಉಭಯ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಪ್ರತಿ ಮನೆಗೆ ತೆರಳಿ ಮತಯಾಚಿಸಬೇಕು. ಆ ಮೂಲಕ ಎನ್‌ಡಿಎ ಮೈತ್ರಿ ಕೂಟವನ್ನು ಬಲವರ್ಧನೆಗೊಳಿಸಬೇಕೆಂದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಹಳ್ಳಿ ಪ್ರಸನ್ನ, ಗ್ರಾ.ಪಂ ಸದಸ್ಯರಾದ ಸೌಮ್ಯಾ, ಲಕ್ಷ್ಮೀ, ರವೀಶ್, ಬಸವರಾಜು, ಸಾಕಮ್ಮ, ಮುಖಂಡರಾದ ಶಾರದಮ್ಮ, ನಂದೀಶ್, ದೇವರಾಜು ಇತರರಿದ್ದರು.
ಇದೇ ವೇಳೆ ರವೀಂದ್ರ ಶ್ರೀಕಂಠಯ್ಯ ಹಾಗೂ ಡಾ.ಸಿದ್ದರಾಮಯ್ಯ ಅವರನ್ನು ಅಲಂಕೃತ ಎತ್ತಿನಗಾಡಿ ಮೆರವಣಿಗೆ ಮೂಲಕ ಗ್ರಾಮದೊಳಗೆ ಕರೆದೊಯ್ಯಲಾಯಿತು. ದೇವಾಲಯದಲ್ಲಿ ಆಯೋಜನೆಗೊಂಡಿದ್ದ ಶ್ರೀರಾಮನವಮಿ ಪೂಜಾ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು.