

ವಿಜಯಪುರ: ವಕ್ಫ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ರಚಿಸಲಾದ ಕೇಂದ್ರದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಆಗಮನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಮಾಜಿ ಶಾಸಕ ರಾಜು ಆಲಗೂರ, ಪಾಲ್ ಅವರು ಸಹ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿಯಲ್ಲಿ ಗಲಾಟೆಯಾಗಿದೆ. ಕೈ ಕೈ ಮಿಲಾಯಿಸಿದ್ದಾರೆ. ಪರಸ್ಪರ ಸಹಕಾರ ಇಲ್ಲದ ಕಾರಣ ಸಭೆ ಬಹಿಷ್ಕರಿಸಲಾಗಿದೆ. ಇಂಥ ಸಂದರ್ಭದಲ್ಲಿ ಜಗದಾಂಬಿಕಾ ಪಾಲ್ ಅವರು ಒಂದೇ ಪಕ್ಷದ ಪರವಾಗಿ ಏಕಾಂಗಿಯಾಗಿ ಆಗಮಿಸುತ್ತಿದ್ದು, ಅದಕ್ಕೆ ತಮ್ಮ ವಿರೋಧ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೇಂದ್ರದಿಂದ ಜಂಟಿ ಸಂಸದೀಯ ಸಮಿತಿ ಬಂದಿದ್ದರೆ ಮತ್ತು ಪಾಲ್ ಅವರು ಸಮಿತಿ ಪರ ಬಂದಿದ್ದರೆ ಅವರಿಗೆ ನಾವೇ ಭೇಟಿ ಮಾಡುತ್ತಿದ್ದೆವು. ಆದರೆ, ಅವರು ಏಕಾಂಗಿಯಾಗಿ ಆಗಮಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಅವರನ್ನು ಭೇಟಿಯಾಗುವ ವಿಚಾರ ಇಲ್ಲ. ಅವರು ಬಿಜೆಪಿ ನಾಯಕರ ಪತ್ರ ಆಧರಿಸಿ ಬರುತ್ತಿರುವುದಾಗಿ ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಒಂದು ಕಡೆ ವಕ್ಫ್ ಹಿತ ಬಯಸಿ ಸಂಸತ್ ಅಧಿವೇಶನದಲ್ಲಿ ಪ್ರಶ್ನೆ ಕೇಳುತ್ತಾರೆ. ಇನ್ನೊಂದು ಕಡೆ ವಕ್ಫ್ ಕಾಯ್ದೆ ಹಾಗೂ ಬೋರ್ಡ್ ರದ್ದು ಮಾಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇದು ದ್ವಂದ್ವ ಹಾಗೂ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ರಾಜು ಆಲಗೂರ ಟೀಕಿಸಿದರು.
ಈಗಾಗಲೇ ಬಿಜೆಪಿ ನಾಯಕರು ವಕ್ಫ್ ಹಿತರಕ್ಷಣೆ ಕುರಿತು ಪ್ರಸ್ತಾಪ ಮಾಡಿರುವ ದಾಖಲೆಗಳು ಹಾಗೂ ವಿಡಿಯೋ ಬಿಡುಗಡೆಗೊಳಿಸಲಾಗಿದೆ. ಆ ಬಗ್ಗೆ ಯಾವುದೇ ಸ್ಪಷ್ಟತೆ ಬಿಜೆಪಿಯಿಂದ ಬಂದಿಲ್ಲ ಎಂದ ಆಲಗೂರ, ಸಂಸತ್‌ನಲ್ಲಿ ಸಚಿವೆ ಶೋಭಾ ಅವರು ವಕ್ಫ್ ಕುರಿತು ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ಸಂಸತ್‌ನಿಂದ ಸಿಕ್ಕ ಉತ್ತರದ ಪ್ರತಿಯನ್ನು ಬಿಡುಗಡೆಗೊಳಿಸಿದರು.
ವಕ್ಫ್ ಆಸ್ತಿಗಳ ಜಿಯೋ ಟ್ಯಾಂಗಿಂಗ್ ಮತ್ತು ಡಿಜಿಟಲೀಕರಣ ಕುರಿತು ವಿವರ, ಆಸ್ತಿಗಳ ಸಂಖ್ಯೆ, ಗುತ್ತಿಗೆ ನಿಯಮವಾಳಿ ಪರಿಶೀಲಿಸುವ ಸಮಿತಿಯ ವರದಿ, ಆರ್ಥಿಕ ಸಹಾಯ ಮತ್ತು ವಿಡಿಯೋ ಕಾನ್ಫ್‌ರೆನ್ಸಿಗೆ ಸಂಬಂಧಿಸಿದಂತೆ ಸಚಿವೆ ಶೋಭಾ ಸಂಸತ್‌ನಲ್ಲಿ ಮಾಹಿತಿ ಕೇಳಿದ್ದಾರೆ.
ಇದಕ್ಕೆ ಉತ್ತರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಸಹ ಸ್ಪಷ್ಟ ಮಾಹಿತಿ ನೀಡಿದ್ದು, ಅದರಲ್ಲಿ ವಕ್ಫ್ ಬೋರ್ಡ್‌ಗಳು, ಐಐಟಿ ರೂರ್ಕಿ ಮತ್ತು ಎಎಂಯು, ಅಲಿಘರ್‌ನಿಂದ ವಕ್ಫ್ ಆಸ್ತಿಗಳ ಜಿಐಎಸ್ ಮ್ಯಾಪಿಂಗ್ ವಿವಿಧ ರಾಜ್ಯಗಳಲ್ಲಿ ಶೇ. 100 ರಷ್ಟು ಮಾಡಲಾಗಿದೆ. ಅದಕ್ಕಾಗಿ ಹಣಕಾಸಿನ ನೆರವು ಸಹ ಒದಗಿಸಲಾಗಿದೆ ಎಂದು ತಿಳಿಸಲಾಗಿದೆ.
ಮುಂದುವರಿದು ವಕ್ಫ್ ಆಸ್ತಿಗಳ ಲೀಸ್ ನಿಯಮ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗಿದೆ, ಆಸ್ತಿಗಳ ಡಿಜಿಟಲೀಕರಣ, ಸಿಬ್ಬಂದಿ ಹೆಚ್ಚಳ, ಮುತುವಲ್ಲಿ ಕಚೇರಿ ಬಲವರ್ಧನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಸಚಿವೆ ಶೋಭಾ ಕರಂದ್ಲಾಜೆ ಕೇಳಿದ ಪ್ರಶ್ನೆ ಹಾಗೂ ಸರ್ಕಾರದಿಂದ ಸಿಕ್ಕ ಉತ್ತರ ವಕ್ಫ್‌ನ ಹಿತ ಕಾಯುವುದೇ ಆಗಿತ್ತು. ಆಗಿದ್ದ ಕಾಳಜಿ ಈಗ ಏಕಿಲ್ಲ ಎಂಬುದೇ ನಮ್ಮ ಪ್ರಶ್ನೆ ಎಂದು ಆಲಗೂರ ತಿಳಿಸಿದರು.
ಕಾಂಗ್ರೆಸ್ ಪಕ್ಷ ಮುಸ್ಲಿಂ ತುಷ್ಠೀಕರಣ ಮಾಡುತ್ತಿದೆ ಎಂದು ಮೊದಲಿನಿಂದಲೂ ಬಿಜೆಪಿ ಮತ್ತು ಬಜರಂಗದಳ, ಆರ್‌ಎಸ್‌ಎಸ್, ವಿಹಿಂಪ ಮತ್ತಿತರ ಸಂಘಟನೆಗಳು ಆರೋಪಿಸುತ್ತಲೇ ಬಂದಿವೆ. ಕಾಂಗ್ರೆಸ್ ಹಿಂದು ವಿರೋಧಿ ಎಂದು ಹಸಿ ಸುಳ್ಳುಗಳನ್ನು ಹೇಳಿ ಜನರ ದಿಕ್ಕು ತಪ್ಪಿಸುತ್ತಿವೆ. ಪ್ರಜ್ಞಾವಂತರು ಇದಕ್ಕೆ ಸೊಪ್ಪು ಹಾಕಬಾರೆಂದರು.
ಮುಖಂಡರಾದ ಡಾ.ಗಂಗಾಧರ ಸಂಬಣ್ಣಿ, ವಿದ್ಯಾರಾಣಿ ತುಂಗಳ, ವಸಂತ ಹೊನಮೊಡೆ ಮತ್ತಿತರರಿದ್ದರು.