ಕೈ ಹಿಡಿದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ

27 bangarpete 1
Published on

 ಬಂಗಾರಪೇಟೆ: ತಾಲೂಕಿನಲ್ಲಿ ರಾಜಕೀಯ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸಮ್ಮುಖದಲ್ಲಿ ಮಂಗಳವಾರ ಕಾಂಗ್ರೆಸ್​ಗೆ ಸೇರ್ಪಡೆಯಾದರು.

ಆಡಳಿತ ಪಕ್ಷ ಕಾಂಗ್ರೆಸ್​ಗೆ ವಿರೋಧ ಪಕ್ಷಗಳ ಪ್ರಭಾವಿ ಮುಖಂಡರು ಒಬ್ಬೊಬ್ಬರಾಗಿ ಸೇರಿಕೊಳ್ಳುತ್ತಿರುವುದು ಜಿಲ್ಲೆಯ ಮೈತ್ರಿಯಲ್ಲಿ ವರ್ಚಸ್ಸು ಣಿಸುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಬಿಜೆಪಿ ತೊರೆದು ಈಗಾಗಲೆ ಕೈ ಹಿಡಿದಿದ್ದಾರೆ. ಅವರ ಬೆನ್ನಲ್ಲೇ ಜೆಡಿಎಸ್​ ತಾಲೂಕು ಅಧ್ಯಕ್ಷ ಎಂ.ಮುನಿರಾಜು, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕಾಂಗ್ರೆಸ್​ಗೆ ಜಿಗಿದಿದ್ದಾರೆ.

ಸ್ಥಳಿಯ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮತ್ತು ಕೆಜಿಎಫ್​ ಶಾಸಕಿ ರೂಪಕಲಾ ಮತ್ತಿತರರು ಕ್ಯಾಸಂಬಳ್ಳಿಯಲ್ಲಿರುವ ಮಾಜಿ ಶಾಸಕರ ಮನೆಗೆ ಭೇಟಿ ನೀಡಿ ಕಾಂಗ್ರೆಸ್​ಗೆ ಆಹ್ವಾನ ನೀಡಿದ್ದರು. ಎಂ.ನಾರಾಯಣಸ್ವಾಮಿ ಜನತಾದಳದಿಂದ ರಾಜಕೀಯಕ್ಕೆ ಪ್ರವೇಶಿಸಿ ಮೀಸಲು ಕ್ಷೇತ್ರವಾಗಿದ್ದ ಬೇತಮಂಗಲ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸೌಮ್ಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಅವರು ಐದು ಬಾರಿ ಶಾಸಕರಾಗಿದ್ದರು. ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷರಾಗಿ, ಮೂರು ಬಾರಿ ಜನತಾದಳ, ಒಂದು ಬಾರಿ ಕಾಂಗ್ರೆಸ್​ ಮತ್ತು ಮತ್ತೊಂದು ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದರು.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್​, ಕೋಲಾರದ ಸಿ.ಬೈರೇಗೌಡ ಅವರ ಅಕಾಲಿಕ ಮರಣ ನಂತರ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಲು ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ ಕುಮಾರ್​, ಮಾಜಿ ಮಂತ್ರಿ ಶ್ರೀನಿವಾಸಗೌಡ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಸೇರಿ ಹಲವು ಜಿಲ್ಲೆಯ ಪ್ರಭಾವಿ ನಾಯಕರು ಕೆ.ಎಚ್​.ಮುನಿಯಪ್ಪ ನೇತೃತ್ವದಲ್ಲಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರಿದ್ದರು.

ಆದರೆ ಎಂ.ನಾರಾಯಣಸ್ವಾಮಿ 540 ಮತ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ.ವೆಂಕಟಮುನಿಯಪ್ಪ ವಿರುದ್ಧ ಸೋತಿದ್ದರು. ಕ್ಷೇತ್ರ ಮರು ವಿಂಗಡಣೆಯಿಂದ ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಸರಳ ಬಹುಮತದಿಂದ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರಕ್ಕೆ ಸಂಖ್ಯಾಬಲ ಪಡೆದುಕೊಳ್ಳಲು ರೂಪಿಸಿದ್ದ ಆಪರೇಷನ್​ ಕಮಲಕ್ಕೊಳಗಾಗಿ ಕಾಂಗ್ರೆಸ್​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಮತ್ತೆ ಗೆಲುವು ಸಾಧಿಸಿದ್ದರು. 2014ರಲ್ಲಿ ಬಿಜೆಪಿಯಿಂದ ಕೋಲಾರ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್​ ಪಡೆದು ಮತದಾನಕ್ಕೆ 2 ದಿನ ಇರುವಾಗಲೇ ಕಣದಿಂದ ತಟಸ್ಥರಾಗಿದ್ದರು. ಅಂದಿನಿಂದ ಬಿಜೆಪಿಯಲ್ಲೇ ಇದ್ದರೂ ಪಕ್ಷದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದರು.

ಜೆಡಿಎಸ್​ ಮತ್ತು ಬಿಜೆಪಿ ಮೈತ್ರಿ ಆದ ನಂತರ ಮಾಜಿ ಶಾಸಕರನ್ನು ಕಾಂಗ್ರೆಸ್​ಗೆ ಸೆಳೆದುಕೊಂಡರೆ ಮುಂದೆ ಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಅನುಕೂಲವಾಗುವುದು ಎಂಬ ಲೆಕ್ಕಾಚಾರದಲ್ಲಿ ನಾರಾಯಣಸ್ವಾಮಿ ಅವರನ್ನು ಕಾಂಗ್ರೆಸ್​ ನಾಯಕರು ಗಾಳ ಹಾಕಿ, ಪಕ್ಷ ಸೇರ್ಪಡೆ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕಾಂಗ್ರೆಸ್​ ಸೇರಿರುವುದನ್ನು ಸ್ವಾಗತಿಸುತ್ತೇನೆ. ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್​ಗೆ ಸೇರಿದ್ದಾರೆ. ಮಾಜಿ ಶಾಸಕರ ಆಗಮನದಿಂದ ಕಾಂಗ್ರೆಸ್​ ಮತ್ತಷ್ಟು ಬಲಿಷ್ಠವಾಗಿದೆ.

> ಎಸ್​.ಎನ್​.ನಾರಾಯಣಸ್ವಾಮಿ

ಶಾಸಕ, ಬಂಗಾರಪೇಟೆ.

ಎಂ.ನಾರಾಯಣಸ್ವಾಮಿ ಆಗಮನದಿಂದ ಬಂಗಾರಪೇಟೆಯಲ್ಲಿ ಕಾಂಗ್ರೆಸ್​ ಬಲಿಷ್ಠಗೊಂಡಿದೆ. ಹಿರಿಯ ರಾಜಕಾರಣಿ ಆಗಿರುವ ಅವರನ್ನು ಪಕ್ಷದಲ್ಲಿ ಗೌರವದಿಂದ ನಡೆಸಿಕೊಳ್ಳಲಾಗುವುದು.

> ಕೆ.ಚಂದ್ರಾರೆಡ್ಡಿ

ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್​ ಸಮಿತಿ, ಕೋಲಾರ

ಎಂ.ನಾರಾಯಣಸ್ವಾಮಿ ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಹಿರಿಯ ರಾಜಕಾರಣಿ, ಅನುಭವಸ್ಥರಾಗಿರುವವರು ಯೋಚಿಸಬೇಕಾಗಿತ್ತು. ಬಿಜೆಪಿಯಿಂದ ಒಂದು ಸಾರಿ ಎಂಪಿ ಟಿಕೆಟ್​, ಮೂರು ಸಾರಿ ಎಂಎಲ್​ಎ ಟಿಕೇಟ್​ ನೀಡಲಾಗಿತ್ತು. ಈ ಬಾರಿ ಚುನಾವಣೆಯಲ್ಲಿ ವಯಸ್ಸಿಗೆ ಗೌರವ ನೀಡಿ ಟಿಕೆಟ್​ ನೀಡಲಾಗಿತ್ತು. ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ಗೌರವವಾಗಿ ನೋಡಿಕೊಂಡಿದ್ದ ಪಕ್ಷ ಬಿಟ್ಟು ಹೋಗಿದ್ದಾರೆ.

> ಬಿ.ವಿ.ಮಹೇಶ್​

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೋಲಾರ

ಗುಂಪುಗಾರಿಕೆಯಿಂದ ಬಿಜೆಪಿ ಬಿಡಲು ನಿರ್ಧಾರ

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಸ್ಪಷ್ಟನೆ

ಬಂಗಾರಪೇಟೆ: ಮಾಜಿ ಸಂಸದ ಎಸ್​.ಮುನಿಸ್ವಾಮಿ ಮತ್ತು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಧ್ಯೆ ಏರ್ಪಟ್ಟಿರುವ ಗುಂಪುಗಾರಿಕೆಯಿಂದ ಬಿಜೆಪಿಗೆ ಸಂಘಟನೆಗೆ ಧಕ್ಕೆ ಉಂಟಾಗುತ್ತಿರುವುದನ್ನು ಗಮನಿಸಿ ಪಕ್ಷದಿಂದ ಹೊರಬಂದಿರುವೆ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಂಪುಗಾರಿಕೆ, ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ಗಳಲ್ಲಿ ಮಾತ್ರ ಪಕ್ಷದ ಸಂಘಟನೆ, ಏಕಪಕ್ಷೀಯ ತೀಮಾರ್ನ ಹಾಗೂ ಹೈಕಮಾಂಡ್​ ವಿರುದ್ಧ ಬೇಸತ್ತು ಕೈ ಹಿಡಿದಿದ್ದೇನೆ. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಕೆಲಸ ಮಾಡಲು ಆಗುತ್ತಿಲ್ಲ. ಎರಡು ಗುಂಪುಗಳ ಮಧ್ಯೆ ಸಂಘಟನೆ ಕಷ್ಟ. ಇಷ್ಟು ಹಿರಿಯನಾಗಿ ಕೆಲಸ ಮಾಡಿಯೂ ಪಕ್ಷ ಸಂಘಟನೆ ಆಗದೆ ಇರುವುದು ಬೇಸರ ತಂದಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಮೋಸವಾಗಿದೆ. ಅಪವಾದ ಹೊರಬೇಕಾಯಿತು. ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯಿತು. ಪಕ್ಷದ ಹೈಕಮಾಂಡ್​ಗೆ ವಾಸ್ತವಾಂಶ ವಿವರಿಸಿದ್ದರೂ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net