ಜ.26ರಂದು ನಗರದಲ್ಲಿ ಅಭಿನಂದನಾ ಸಮಾರಂಭ: ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾಹಿತಿ

Former MLA G.B. Shivakumar press conference Mandya
Published on

ಮಂಡ್ಯ: ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತ ಪೂರ್ವ ಯಶಸ್ಸಿಗೆ ಕಾರಣಕರ್ತರಾದವರಿಗೆ ಅಭಿನಂದನೆ ಸಲ್ಲಿಸಲು ಜಿಲ್ಲಾ ನಾಗರಿಕ ಅಭಿನಂದನಾ ಸಮಿತಿ ಮತ್ತು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜ.26ರಂದು ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಅಭಿನಂದನಾ ಸಮಾರಂಭ ಮತ್ತು ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರೂ ಆದ ಸಮಿತಿಯ ಪೋಷಕ ಜಿ.ಬಿ.ಶಿವಕುಮಾರ್ ತಿಳಿಸಿದರು.

ಸಮ್ಮೇಳನದ ಯಶಸ್ಸಿಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ, ಜಿಲ್ಲಾ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ ಹಾಗೂ ಶಾಸಕರು, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ನಮ್ಮ ಜವಾಬ್ದಾರಿ ಮೆರೆಯುವ ಕಾರ್ಯಕ್ರಮ ಇದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಿತಿ ಅಧ್ಯಕ್ಷರೂ ಆದ ಮಾಜಿ ಶಾಸಕ ಎಚ್.ಬಿ.ರಾಮು ಮಾತನಾಡಿ, ಅಂದು ಸಂಜೆ 6ಗಂಟೆಗೆ ಆಯೋಜಿಸಿರುವ ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ನುಡಿಜಾತ್ರೆಯ ಸರ್ವಾಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ, ಸಮ್ಮೇಳನ ಯಶಸ್ಸಿಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರು, ಜಿಲ್ಲಾಡಳಿತ ಮತ್ತು ಕಸಾಪ ಪ್ರಮುಖರನ್ನು ಸನ್ಮಾನಿಸುವರು. ಅಭಿನಂದನಾ ಕಾರ್ಯಕ್ರಮದ ನಂತರ ಗಾಯಕರಾದ ಹೇಮಂತ್, ಶಮಿತಾ ಮಲ್ನಾಡ್ ಮತ್ತು ಹರ್ಷ ತಂಡದಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ಮಾತನಾಡಿ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರ ನಡವಳಿಕೆ ಬಗ್ಗೆ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆ. ಸಮ್ಮೇಳನದ ಯಶಸ್ಸಿಗೆ ದುಡಿದ ಕಾರಣಕ್ಕೆ ಅವರನ್ನು ಸ್ವಾಗತಿಸಲಾಗುವುದು. ಆದರೆ ಅವರಿಗೆ ಯಾವುದೇ ರೀತಿಯ ಆಹ್ವಾನ ಪತ್ರ ನೀಡಲಾಗುವುದಿಲ್ಲ. ಮೊಬೈಲ್ ಕರೆ ಮೂಲಕ ಆಹ್ವಾನ ಮಾಡಲಾಗುವುದು ಎಂದು ಹೇಳಿದರು.

ಸಮಿತಿಯ ಖಜಾಂಚಿ ಸಿ.ತ್ಯಾಗರಾಜು, ಕಾರ್ಯಾಧ್ಯಕ್ಷ ಎಚ್.ಪಿ.ಶಶಿಕುಮಾರ್, ಉಪಾಧ್ಯಕ್ಷ ಕಂಬದಹಳ್ಳಿ ಪುಟ್ಟಸ್ವಾಮಿ, ಪ್ರಧಾನ ಸಂಚಾಲಕ ತಗ್ಗಹಳ್ಳಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಪ್ರದೀಪ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net