

ಮಾಯಕೊಂಡ: ಮಾಯಕೊಂಡ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಸಂಪೂರ್ಣ ಶೂನ್ಯ ಎಂದು ಮಾಜಿ ಶಾಸಕ ಎಂ.ಬಸವರಾಜ್ ನಾಯ್್ಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಗ್ರಾಮದ ಪ್ರವಾಸಿ ಮಂದಿರದಲ್ಲಿ ಶನಿವಾರ ಪದವೀಧರ ಕ್ಷೇತ್ರದ ಚುನಾವಣಾ ಮತಪಟ್ಟಿ ಪರಿಷ್ಕರಣೆ ಹಾಗೂ ಸೇರ್ಪಡೆ ಕುರಿತು ಬಿಜೆಪಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಎಸ್ಸಿ ಮೀಸಲು ಕ್ಷೇತ್ರವಾಗಿರುವ ಮಾಯಕೊಂಡಕ್ಕೆ ಅನುದಾನ ಬಂದರೂ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿಲ್ಲ. ಎಸ್ಸಿಪಿ, ಟಿಎಸ್ಪಿ ಅನುದಾನ ಎಲ್ಲಿ ಹೋಯಿತು, ಹಾಗಾದರೆ ದುರ್ಬಳಕೆಯಾಗಿದೆಯೇ? ಪದವೀಧರ ಮತಪಟ್ಟಿ ಪರಿಷ್ಕರಣೆಗಾಗಿ ಕ್ಷೇತ್ರದ 110 ಗ್ರಾಮಗಳಿಗೆ ಈಗಾಗಲೇ ಭೇಟಿ ನೀಡಿದ್ದು, ಗ್ರಾಮಗಳನ್ನು ಸಂರ್ಪಸುವ ಎಲ್ಲ ರಸ್ತೆಗಳು ಮತ್ತು ಮುಖ್ಯ ರಸ್ತೆಗಳು ಹಾಳಾಗಿವೆ. ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಾಯಕೊಂಡ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿ, ಕ್ಷೇತ್ರದ ಹಲವು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆ ತಲುಪಿವೆ ಮತ್ತು ಹಲವು ಗ್ರಾಮಗಳಿಗೆ ಸಾರಿಗೆ ಸಂಪರ್ಕವಿಲ್ಲ, ಅಲ್ಲದೇ ಇನ್ನೂ ಅನೇಕ ಸಮಸ್ಯೆಗಳನ್ನು ಕ್ಷೇತ್ರದ ಜನ ಎದುರಿಸುತ್ತಿದ್ದಾರೆ ಎಂದರು.
ಮತಪಟ್ಟಿ ಪರಿಷ್ಕರಣೆ ಹಾಗೂ ಸೇರ್ಪಡೆ ಕುರಿತು ಬಾಡ, ಅಣಜಿ, ಆನಗೋಡು ಹೋಬಳಿಗಳ 110 ಗ್ರಾಮಗಳಿಗೆ ಈಗಾಗಲೇ ಭೇಟಿ ನೀಡಲಾಗಿದೆ. ಕ್ಷೇತ್ರದಲ್ಲಿರುವ ಒಟ್ಟು 252 ಬೂತ್ಗಳಿಗೂ ಅಧ್ಯಕ್ಷರನ್ನು ನೇಮಕ ಮಾಡಿ, ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಸಂಡೂರು ರಾಜಶೇಖರ್, ಎಂ.ಜಿ. ಗುರುನಾಥ್, ಪೂಜಾರ್ ಅಶೋಕ್, ರಂಗಸ್ವಾಮಿ ಶಿವು, ಮಾದಪ್ಪ, ಜಿ. ಜಗದೀಶ್ ಇತರರು ಇದ್ದರು.