

ಮಂಡ್ಯ: ಮಳವಳ್ಳಿ ಸೇರಿದಂತೆ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ನೀರೊದಗಿಸದೇ ಜಲಪಾತೋತ್ಸವ ಹಾಗೂ ಕಾವೇರಿ ಆರತಿ ಯಾವ ಸಂಭ್ರಮಕ್ಕೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನಿಸಿದರು.
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಯಿತು. ಮೆಟ್ಟೂರೂ ಜಲಾಶಯ ತುಂಬಿ ಸಮುದ್ರಕ್ಕೆ ಹರಿದು ಹೋಯಿತು. ಆದರೆ ನಮ್ಮ ರೈತರಿಗೆ ಬೇಸಾಯ ಮಾಡಲು ನೀರು ಕೊಡಲಿಲ್ಲ. ಕೆರೆ ಕಟ್ಟೆ ತುಂಬಿಸದ ಪರಿಣಾಮ ನೋವಿನಲ್ಲಿದ್ದಾರೆ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಯಾವ ಖುಷಿಗೆ ಜಲಪಾತೋತ್ಸವ ಮಾಡಿದರು. ಇದಲ್ಲದೆ ಈಗ ಕಾವೇರಿ ಆರತಿ ಮಾಡಲು ತರಬೇತಿ ಪಡೆಯಲು ಹೋಗಿದ್ದೀರಿ. ಜಲಪಾತೋತ್ಸವ ಹಾಗೂ ಕಾವೇರಿ ಆರತಿಗೆ ನಮ್ಮ ವಿರೋಧವಿಲ್ಲ. ಆದರೆ ಅದೇ ಬದ್ಧತೆಯನ್ನು ರೈತರ ವಿಚಾರದಲ್ಲಿಯೂ ತೋರಿಸಬೇಕಿತ್ತಲ್ಲವೇ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಾ ಪ್ರಹಾರ ನಡೆಸಿದರು.
ರೈತರ ಬದುಕು ಹಸನಾಗಿದ್ದರೆ ಗಗನಚುಕ್ಕಿ ಜಲಪಾತೋತ್ಸವ ಹಾಗೂ ಕಾವೇರಿ ಆರತಿ ಕಾರ್ಯಕ್ರಮ ಮಾಡಬಹುದಿತ್ತು. ಆದರೆ ಮಳವಳ್ಳಿ ತಾಲೂಕಿನಲ್ಲಿ ಕೆರೆ-ಕಟ್ಟೆಗಳು ಬರಿದಾಗಿದೆ. ಎರಡು ವರ್ಷಗಳಿಂದ ಈ ಭಾಗದಲ್ಲಿ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಈ ಬಾರಿ ಕೆಆರ್‌ಎಸ್ ತುಂಬಿದ್ದರೂ ರೈತರಿಗೆ ಅನುಕೂಲ ಮಾಡಿಕೊಡಲಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಕೊಟ್ಟರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ನರೇಂದ್ರಸ್ವಾಮಿ ಗಮನಹರಿಸಲಿಲ್ಲ. ಕೆರೆ ಕಟ್ಟೆ ತುಂಬಿಸದೇ ಸುಮಾರು 2 ಟಿಎಂಸಿ ನೀರನ್ನು ಜಲಪಾತೋತ್ಸವದ ಹೆಸರಿನಲ್ಲಿ ತ.ನಾಡಿಗೆ ಹರಿಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.
ವಿಶ್ವೇಶ್ವರಯ್ಯ, ಮಾಧವಮಂತ್ರಿ, ರಾಮಸ್ವಾಮಿನಾಲೆ ಸೇರಿದಂತೆ ಐದು ನಾಲಾ ವ್ಯಾಪ್ತಿಯಲ್ಲಿ ಮಳವಳ್ಳಿ ತಾಲೂಕಿನ ರೈತರು ಬೆಳೆ ಬೆಳೆಯುತ್ತಾರೆ. ಆದರೆ ರಾಮಸ್ವಾಮಿ ನಾಲಾ ವ್ಯಾಪ್ತಿಯಲ್ಲಿ ಮಾತ್ರ ರೈತರು ಭತ್ತ ನಾಟಿ ಮಾಡಿದ್ದಾರೆಯೇ ವಿನಃ ಬೇರೆ ನಾಲೆಗಳ ವ್ಯಾಪ್ತಿಯಲ್ಲಿ ಯಾವುದೇ ಬೆಳೆ ಬೆಳೆಯಲು ಈವರೆವಿಗೂ ಸಾಧ್ಯವಾಗಿಲ್ಲ. ಮಳೆಯಾಶ್ರಿತ ಪ್ರದೇಶಗಳಾಗಿರುವ ಹಲಗೂರು ಮತ್ತಿತರ ಹೋಬಳಿಗಳಲ್ಲಿ ರೇಷ್ಮೆ ಕೃಷಿ ಮಾಡಿದರೂ ಅವೆಲ್ಲವೂ ಒಣಗುತ್ತಿವೆ. ರೈತರು ರೇಷ್ಮೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಬೆಳೆ ಇಲ್ಲದೆ ಅವರ ಬದುಕು ಮೂರಾಬಟ್ಟೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಎಚ್ಚೆತ್ತುಕೊಂಡು ತಾಲೂಕಿನ ಕೆರೆ ಕಟ್ಟೆ ತುಂಬಿಸಿ. ಮಾತ್ರವಲ್ಲದೆ ಪ್ರತಿ ಎಕರೆಗೆ 30 ರಿಂದ 25 ಸಾವಿರ ಪರಿಹಾರ ರೂ ಕೊಡಲೇಬೇಕು ಎಂದು ಒತ್ತಾಯಿಸಿದರು.
ಜಿ.ಪಂ ಮಾಜಿ ಸದಸ್ಯರಾದ ರವಿ, ಹನುಮಂತು, ಮುಖಂಡರಾದ ನಂದಕುಮಾರ್, ಜಯರಾಂ, ಮೆಹಬೂಬ್‌ಪಾಷ ಇದ್ದರು.
ಅ.18, 19ರಂದು ಉದ್ಯೋಗ ಮೇಳ
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅ.18 ಮತ್ತು 19ರಂದು ಮಂಡ್ಯದಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲು ನಿರ್ಧರಿಸಲಾಗಿದೆ ಎಂದು ಡಾ.ಕೆ.ಅನ್ನದಾನಿ ತಿಳಿಸಿದರು.
ಬಿ.ಇ ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದಿರುವ ಮೂರೂವರೆ ಸಾವಿರಕ್ಕೂ ಹೆಚ್ಚು ಜನರಿಗೆ ದೊಡ್ಡ ದೊಡ್ಡ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿಕೊಡಲು ಯೋಜನೆ ರೂಪಿಸಿದ್ದಾರೆ ಎಂದು ಹೇಳಿದರು.