ನನೆಗುದಿಗೆ ಬಿದ್ದಿದ್ದ ರೈಲ್ವೆ ಕಾಮಗಾರಿ ಮರುಚಾಲನೆ: ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ

Former MLA Annadani press conference Mandya
Published on

ಮಂಡ್ಯ: ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳ ಜನರ ಸುಮಾರು 28 ವರ್ಷದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಬಹುನಿರೀಕ್ಷಿತ ರೈಲ್ವೆ ಮಾರ್ಗಕ್ಕೆ ಪುನರ್ ಚಾಲನೆ ಸಿಗುತ್ತಿದೆ ಎಂದು ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಹೆಜ್ಜಾಲದಿಂದ ಸತ್ಯಮಂಗಲದವರೆಗೆ ರೈಲ್ವೆ ಮಾರ್ಗ ಮಾಡುವ ಸಂಬಂಧ 1996-97ರಲ್ಲಿ ಚಾಲನೆ ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಪ್ರಗತಿಯಾಗಿರಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಸಂಸದ ಹಾಗೂ ಕೇಂದ್ರ ಸಚಿವರಾದ ಬಳಿಕ ರೈಲ್ವೆ ಮಾರ್ಗ ಮತ್ತೆ ಪ್ರಾರಂಭವಾಗಲಿದೆ. ಈ ನಿಟ್ಟಿನಲ್ಲಿ ನಾನು ಮತ್ತು ಎಚ್‌ಡಿಕೆ ಅವರ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸ್ಪಂದಿಸಿದ್ದಾರೆ. ಅಂತೆಯೇ ಮುಂದಿನ ಬಜೆಟ್‌ನಲ್ಲಿ ಯೋಜನೆಯನ್ನು ಸೇರಿಸಿಕೊಳ್ಳಲಾಗುವುದೆಂದು ತಿಳಿಸಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೈಗಾರಿಕೆಗಳ ಸ್ಥಾಪನೆಗೆ ಮಳವಳ್ಳಿ ತಾಲೂಕಿನಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಆದ್ದರಿಂದ ಮುಂದಿನ ದಿನದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಕೈಗಾರಿಕೆ ಸ್ಥಾಪನೆ ಮಾಡುತ್ತಾರೆನ್ನುವ ವಿಶ್ವಾಸವಿದೆ ಎಂದ ಅವರು, ಜನವರಿಯಲ್ಲಿ ಕೊನೆಯದಾಗಿ ಕೆಆರ್‌ಎಸ್ ಡ್ಯಾಂನಿಂದ ನಾಲೆ ನೀರು ಹರಿಸಲಾಗಿತ್ತು. ಸುಮಾರು ಏಳು ತಿಂಗಳು ಕಳೆದರೂ ನೀರು ಕೊಡದಿದ್ದರೆ ರೈತರ ಪರಿಸ್ಥಿತಿ ಏನು. ಬೆಳೆಗೆ ನೀರಿಲ್ಲದೆ ಅಂರ್ತಜಲವೂ ಪಾತಾಳ ಸೇರಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡರಾದ ಜಯರಾಂ, ಪುಟ್ಟರಾಮು, ನಂದಕುಮಾರ್, ಪುಟ್ಟಬುದ್ದಿ, ಕಂಸಾಗರ ರವಿ, ಕಾಂತಾರಾಜು, ಮೆಹಬೂಬ್ ಪಾಷಾ, ಶ್ರೀಧರ್, ಸಿದ್ದಾಚಾರಿ, ಸಾತನೂರು ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net