

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಿ ಬೆಳೆದು ನಿಂತಿರುವ ಬೆಳೆ ರಕ್ಷಣೆ ಮಾಡದ ರಾಜ್ಯಸರ್ಕಾರ, ಜೂನ್ ತಿಂಗಳಲ್ಲೇ ಬಾಗಿನ ಅರ್ಪಿಸಿದ ಶಿಲಾನ್ಯಾಸ ನೆರವೇರಿಸಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಟೀಕಿಸಿದರು.
ಮೇ ತಿಂಗಳಲ್ಲಿ ಅಣೆಕಟ್ಟೆಯಲ್ಲಿ 95 ಅಡಿ ನೀರು ಶೇಖರಣೆ ಆಗಿತ್ತು. ಆ ವೇಳೆ ಒಂದು ಕಟ್ಟು ನೀರು ಹರಿಸದೇ ಭತ್ತದ ಇಳುವರಿ ಕುಂಠಿತವಾಗಲು ಕಾರಣವಾದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಈ ಬಗ್ಗೆ ಮೌನವಾಗಿರುವುದು ಸರಿಯೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಅಂತಿಮ ಹಂತದಲ್ಲಿ ನಾಟಿ ಮಾಡಿರುವ ಭತ್ತ, ಬೆಳೆದು ನಿಂತಿರುವ ಕಬ್ಬು, ತೆಂಗು, ಅಡಿಕೆ ಸೇರಿದಂತೆ ಹಲವು ಬೆಳೆಗಳಿಗೆ ನೀರು ನೀಡಿ ರೈತರನ್ನು ರಕ್ಷಿಸಬೇಕಾದ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿ ಇದುವರೆಗೂ ನಾಲೆಗಳಲ್ಲಿ ನೀರು ಹರಿಸದೇ ಗುತ್ತಿಗೆದಾರನ ಹಿತ ಕಾಯಲು ಮುಂದಾಗಿರುವುದು ನಾಚಿಕೆಗೇಡು. ಕೃಷಿ ಸಚಿವರ ತವರಿನಲ್ಲೇ ರೈತರು ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದ ಶೇ.30ರಷ್ಟು ಭತ್ತದ ಇಳುವರಿ ಕಡಿಮೆಯಾಗಿದೆ. ಕಬ್ಬು ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿದ್ದರೂ ನೀರು ಹರಿಸದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ಹೊರಹಾಕಿದರು.
ಬೆಳೆ ರಕ್ಷಣೆಗಾಗಿ ನಾಲೆಗೆ ನೀರು ಹರಿಸಲು ರೈತರು ಮನವಿ ಮಾಡಿದರೆ, ರೈತರಿಗೆ ಕೆಲಸವಿಲ್ಲವೇ ಎಂದು ಹೀಯಾಳಿಸುವ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಯಾವ ಧೈರ್ಯದಿಂದ ರೈತರ ಬಳಿ ತೆರಳುತ್ತಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗುವಿನಹಳ್ಳಿ, ಕೊತ್ತತ್ತಿ, ತಗ್ಗಹಳ್ಳಿ ಸೇರಿದಂತೆ ಹಲವು ಕಡೆ ಕಬ್ಬಿನ ಫಸಲು ಒಣಗುತ್ತಿರುವ ದೃಶ್ಯವನ್ನು ಫೋಟೋ ಸಹಿತ ಪ್ರದರ್ಶಿಸಿದ ರವೀಂದ್ರ ಶ್ರೀಕಂಠಯ್ಯ, ಮದ್ದೂರು ಮತ್ತು ಮಳವಳ್ಳಿ ಭಾಗದ ರೈತರ ಸ್ಥಿತಿ ಏನಾಗಿರಬೇಕು. ಆ ಭಾಗದ ಶಾಸಕರು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
ಭತ್ತ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ನಿರಾಸಕ್ತಿ ತೋರಿರುವುದು ನಾಚಿಕೆಗೇಡಿನ ವರ್ತನೆ. ಬೆಲೆ ಕುಸಿತ ಹಾಗೂ ಇಳುವರಿ ನಷ್ಟದಿಂದ ರೈತರು ಪರಿತಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ 2,300 ರೂ. ಬೆಂಬಲ ಬೆಲೆ ನೀಡಿ ಭತ್ತ ಖರೀದಿಗೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯದೇ ಕ್ವಿಂಟಾಲ್ ಭತ್ತ ಕೇವಲ 1,800 ರಿಂದ 1,900 ರೂ.ಗೆ ಮಾರಾಟವಾಗುತ್ತಿದ್ದು, ನಷ್ಟಕ್ಕೆ ಹೊಣೆ ಯಾರು?. ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹವಿದ್ದರೂ ನೀರು ಹರಿಸಲು ಮೀನಾಮೇಷ ಏಣಿಸುವ ಸರ್ಕಾರ ನಾಲೆಗಳ ಆಧುನೀಕರಣಕ್ಕೆ ಸಾವಿರಾರು ಕೋಟಿ ರೂ ಅನುದಾನ ನೀಡಿದರೆ ಏನು ಪ್ರಯೋಜನ. ಯುವ ರೈತರು ಕೃಷಿ ತ್ಯಜಿಸುವ ದಾರಿಯಲ್ಲಿರುವಾಗ ಸರ್ಕಾರ ಹಾಗೂ ಕೃಷಿ ಸಚಿವರಿಗೆ ರೈತರನ್ನು ಕಂಡರೆ ತಾತ್ಸಾರವೇ ಎಂದು ಕಿಡಿಕಾರಿದರು.
ಜೆಡಿಎಸ್ ಮುಖಂಡ ಲೋಕೇಶ್ ಉಪಸ್ಥಿತರಿದ್ದರು.
ಯಾರನ್ನು ಮೆಚ್ಚಿಸಲು ಕಾವೇರಿ ಆರತಿ
ಕಾವೇರಿ ಆರತಿಗೆ ನನ್ನ ವಿರೋಧವಿಲ್ಲ. ಆದರೆ 92 ಕೋಟಿ ರೂ ವೆಚ್ಚದಲ್ಲಿ ಹಾಗೂ ಅಣೆಕಟ್ಟೆ ಸಮೀಪದಲ್ಲಿಯೇ ಕಾವೇರಿ ಆರತಿ ಮಾಡಲು ಹೊರಟಿರುವುದು ಯಾರನ್ನು ಮೆಚ್ಚಿಸಲು ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
ಕಾವೇರಿ ಆರತಿಗೆ ಶ್ರೀರಂಗಪಟ್ಟಣ ಸಮೀಪದ ಸ್ನಾನಘಟ್ಟ ಸೂಕ್ತ ಪ್ರದೇಶ. ನಾನು ಶಾಸಕನಾಗಿದ್ದ ವೇಳೆ 8 ಕೋಟಿ ರೂ. ಅನುದಾನದಲ್ಲಿ ಮೆಟ್ಟಿಲುಗಳ ನವೀಕರಣ ಮಾಡಲಾಗಿದೆ. ಆ ಸ್ಥಳದಲ್ಲಿ ಕಡಿಮೆ ವೆಚ್ಚದಲ್ಲಿ ಕಾವೇರಿ ಆರತಿ ಧಾರ್ಮಿಕ ಕಾರ್ಯ ಮಾಡಿದರೆ ಅಣೆಕಟ್ಟೆಯ ಸುರಕ್ಷತೆ ಜತೆಗೆ ಶ್ರೀರಂಗಪಟ್ಟಣ ಅಭಿವೃದ್ದಿ ಸಾಧ್ಯವಾಗುತ್ತದೆ ಎಂಬುವುದನ್ನು ಜಿಲ್ಲೆಯ ಜನಪ್ರತಿನಿಧಿಗಳು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಕೊಂಡೊಯ್ಯುವ ಯೋಜನೆಗೆ ರೈತರ ವಿರೋಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಸ್ಯೆ ಬಗೆಹರಿಸಲು ಸರ್ಕಾರದ ಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಬೆಂಗಳೂರು ನಗರಕ್ಕೆ 6ನೇ ಹಂತದ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿರುವುದು ದೊಡ್ಡ ದುರಂತದ ಸಂಗತಿ. ಇದರಿಂದ ಮಂಡ್ಯ ಜಿಲ್ಲೆಯ ಅನಾನುಕೂಲವಾಗಿದೆ ಎನ್ನುವುದನ್ನು ಸರ್ಕಾರ ಅರಿತುಕೊಳ್ಳಬೇಕು ಎಂದರು.