

ಮುದ್ದೇಬಿಹಾಳ: ಜಗತ್ತು ಮೆಚ್ಚಿದ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡು ಶುಭ ಮುಹೂರ್ತದಲ್ಲಿ ಕಾರ್ಯಾರಂಭ ಮಾಡಿರುವ ನವದೆಹಲಿಯ ಹೊಸ ಸಂಸತ್ ಭವನ ದೇಶದ ಪ್ರಗತಿಯ ಸಂಕೇತವಾಗಿದೆ ಎಂದು ಮಾಜಿ ಶಾಸಕ, ಉದ್ಯಮಿ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಸಿದ್ದಾಪುರ ಪಿಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಸಮುದಾಯ ಭವನ ಲೋಕಾರ್ಪಣೆ, ಸಾರ್ವತ್ರಿಕ ಗಣೇಶ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಸಂಸತ್ತಿನಲ್ಲಿ ದೇಶದ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಐತಿಹಾಸಿಕ ಮಸೂದೆ ಮಂಡನೆ ಮಾಡಿರುವುದು ಬಹುದೊಡ್ಡ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ ಎಂದರು.
ಸಿದ್ದಾಪುರದಲ್ಲಿಯೂ 12ನೇ ಶತಮಾನದಲ್ಲಿ ಅಂದಿನ ಪಾರ್ಲಿಮೆಂಟ್ ಎಂದೇ ಕರೆಸಿಕೊಳ್ಳುತ್ತಿದ್ದ ಅನುಭವ ಮಂಟಪ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾ ಮಾನವತಾವಾದಿ ಬಸವೇಶ್ವರರನ್ನು ನಾವಿಂದು ಸ್ಮರಿಸಿಕೊಳ್ಳಲೇಬೇಕು. ದೆಹಲಿಯಲ್ಲಿ ನೂತನ ಸಂಸತ್ ಭವನ, ಸಿದ್ದಾಪುರದಲ್ಲಿ ನೂತನ ಬಸವೇಶ್ವರ ಸಮುದಾಯ ಭವನ ಲೋಕಾರ್ಪಣೆ ಎರಡೂ ಪ್ರಸಂಗಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂಥವುಗಳು ಎಂದರು.
ಜಿಪಂ ಮಾಜಿ ಸದಸ್ಯ, ಬಸರಕೋಡ ಪಿಕೆಪಿಎಸ್ ಅಧ್ಯಕ್ಷ ಹೇಮರಡ್ಡಿ ಮೇಟಿ ಮಾತನಾಡಿ, ಸಮುದಾಯ ಭವನ ಹೊಂದುವ ಗ್ರಾಮಸ್ಥರ ಆಸೆ ಇದೀಗ ಈಡೇರಿದಂತಾಗಿದೆ. ಶಾಸಕರಾಗಿದ್ದ ಅವಧಿಯಲ್ಲಿ ನಡಹಳ್ಳಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಜನರು ಹಿನ್ನೆಡೆ ತಂದು ಕೊಟ್ಟರು. ಅಭಿವೃದ್ಧಿಗೆ ಬೆಲೆ ಇಲ್ಲದಂತೆ ಮಾಡಿದರು ಎಂದು ಕಳವಳ ವ್ಯಕ್ತಪಡಿಸಿದರು.
ಯುವ ಮುಖಂಡ ರವೀಂದ್ರ ಬಿರಾದಾರ ಮಾತನಾಡಿ, ಲೋಕಾರ್ಪಣೆಗೊಂಡಿರುವ ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ನಡಹಳ್ಳಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ವೈಯಕ್ತಿಕವಾಗಿ 15 ಲಕ್ಷ ರೂ. ಹಣ ನೀಡಿದ್ದಾರೆ. ಹೇಮರಡ್ಡಿ ಮೇಟಿ ಅವರೂ ಸಹಿತ 51 ಸಾವಿರ ರೂ. ವೈಯಕ್ತಿಕ ಹಣ ನೀಡಿದ್ದಾರೆ. ಸರ್ಕಾರದಿಂದ ಇದಕ್ಕೆ ಅನುದಾನ ಬಂದಿರಲಿಲ್ಲ. ತಾಲೂಕಿನಲ್ಲಿ ನಡಹಳ್ಳಿ ಅವರ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಮುದಾಯ ಭವನಗಳು ನಿರ್ಮಾಣಗೊಂಡಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕರಭಂಟನಾಳ ಗುರು ಗಂಗಾಧರೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಇಟಗಿ ಭೂ ಕೈಲಾಸ ಮೇಲುಗದ್ದುಗೆ ಮಠದ ಗುರುಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕೂಡ್ಲಯ್ಯ ಹಿರೇಮಠ ಸ್ವಾಮೀಜಿ, ರುದ್ರಗೌಡ ಪಾಟೀಲ (ಹೆಬ್ಬಳ್ಳಿ ಗೌಡರ), ವಕೀಲ ಎಂ.ಬಿ.ಬಿರಾದಾರ, ಗ್ರಾಪಂ ಉಪಾಧ್ಯಕ್ಷ ಬಸಪ್ಪ ಚಲವಾದಿ, ಗ್ರಾಪಂ ಸದಸ್ಯ ಡಿ.ಬಿ.ಪಾಟೀಲ, ಕೆಬಿಜೆಎನ್‌ಎಲ್ ಎಸ್.ಎ.ತೊಂಡಿಹಾಳ, ಸಂಗನಗೌಡ ಪಾಟೀಲ, ನಿವೃತ್ತ ಶಿಕ್ಷಕ ಎಚ್.ಬಿ.ಅಸ್ಕಿ, ಗಣ್ಯರಾದ ಬಾಪುಗೌಡ ಪಾಟೀಲ, ಸಿದ್ದನಗೌಡ ಆಲೂರ, ಗೌಡಪ್ಪಗೌಡ ಬಿರಾದಾರ, ನಾನಾಗೌಡ ಬಿರಾದಾರ, ಹಣಮಂತರಾಯಗೌಡ ಮಾದಿನಾಳ, ಮುತ್ತು ಮಂಕಣಿ, ರಾಮನಗೌಡ ಡೊಮನಾಳ, ಗಂಗಾಧರ ಬಡಿಗೇರ, ಮಲ್ಲಯ್ಯ ಹಿರೇಮಠ ಇತರರಿದ್ದರು. ಯುವ ಮುಖಂಡ ಗುರು ರಾಯಗೊಂಡ ಕಾರ್ಯಕ್ರಮ ನಿರ್ವಹಿಸಿದರು.