

ಚಿಕ್ಕಬಳ್ಳಾಪುರ: ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಗೃಹ ಸಚಿವ, ರೇಷ್ಮೆ ಸಚಿವ, ಪಶುಸಂಗೋಪನೆ ಸಚಿವ, ಲೋಕೋಪಯೋಗಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಸೇರಿದಂತೆ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತು ಗಮನ ಸೆಳೆದಿದ್ದ ಹಿರಿಯ ನಾಯಕರ ಪ್ರತಿಮೆಯು ಬೀದಿಪಾಲಾಗಿದೆ. ಇದೀಗ ನೋಡುವವರಿಲ್ಲದೇ ಅನಾಥವಾಗಿ ಬಿದ್ದಿದೆ.
ಮಾಜಿ ಸಚಿವ ದಿವಂಗತ ಕೆ.ಎಂ.ಕೃಷ್ಣಾರೆಡ್ಡಿಯ ಪ್ರತಿಮೆಯನ್ನು ಚಿಂತಾಮಣಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದರೆ, ಹಲವು ದಿನಗಳಿಂದ ನಿರ್ಜನ ಪ್ರದೇಶದಲ್ಲಿ ಪ್ರತಿಮೆಯನ್ನು ಬ್ಯಾನರ್‌ಗೆ ಅಳವಡಿಸಿರುವ ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿ, ಒಂದು ಮರದ ಕೆಳಗಿಡಲಾಗಿದೆ. ಹೀಗೆ ಅನಾಥವಾಗಿ ಬಿಟ್ಟು ಅವಮಾನಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕೆ.ಎಂ.ಕೃಷ್ಣಾರೆಡ್ಡಿ ಪ್ರಭಾವಿ ನಾಯಕ. ಇವರ ಕೊಡುಗೆ ಅಪಾರ. ಇದರ ನೆನಪಿಗಾಗಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹೇಳಿಕೊಂಡು ರಾಜಕೀಯಕ್ಕೆ ಬಂದ ಹಲವರಿಗೆ ಜಾಣ ಮೆರವು ಕಾಡುತ್ತಿದೆ.
ನಗರದಲ್ಲಿ ೧೦ ಅಡಿ ಎತ್ತರದ ಒಂದು ಪ್ರತಿಮೆ ಹಾಗೂ ಬಟ್ಲಹಳ್ಳಿಯ ಬಸ್ ನಿಲ್ದಾಣದಲ್ಲಿ ಎದೆಯ ಭಾಗದವರೆಗಿನ ಒಂದು ಪುತ್ಥಳಿಯನ್ನು ಪ್ರತಿಷ್ಠಾಪಿಸಲು ನಿಶ್ಚಯಿಸಿ ಅದರ ಅಚ್ಚುಗಳು ನೆರೆಯ ಆಂಧ್ರದ ಅಮರಾವತಿಯ ತೆನಾಲಿ ರವಿ ಎಂಬ ಖ್ಯಾತ ಶಿಲ್ಪಿಯಿಂದ ಮಾಡಿಸಿದ್ದು ಇದರಲ್ಲಿ ೧೦ ಲಕ್ಷ ರೂ ವೆಚ್ಚದ ಪುತ್ಥಳಿಯನ್ನು ಬಟ್ಲಹಳ್ಳಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ, ೧೦ ಅಡಿ ಎತ್ತರದ ಕಲ್ಲಿನ ಕೆಎಂಕೆ ಪುತ್ಥಳಿಯು ಚಿಂತಾಮಣಿ ನಗರದ ಬೆಂಗಳೂರು ಜೋಡಿ ರಸ್ತೆಯ ಕೆ.ಎಸ್.ಆರ್.ಟಿ.ಸಿ ಘಟಕದ ಸಮೀಪದ ಖಾಸಗಿಯವರಿಗೆ ಸೇರಿದ ಖಾಲಿ ಜಾಗದ ಮರದ ಕೆಳಗೆ ಪ್ಲಾಸ್ಟಿಕ್ ಪೇಪರ್‌ನಲ್ಲಿ ಅನಾಥವಾಗಿಡಲಾಗಿದೆ. ಕಳೆದ ಐದಾರು ವರ್ಷಗಳಿಂದಲೂ ಇದರ ಕಡೆಗೆ ಗಮನಹರಿಸುವವರೇ ಇಲ್ಲದಂತಾಗಿದೆ. ಈಗಲಾದರೂ ಧೀಮಂತ ವ್ಯಕ್ತಿತ್ವದ ಕೆಎಂಕೆ ಪ್ರತಿಮೆಯನ್ನು ಅನಾಥವಾಗಿ ಬಿಸಾಡುವ ಬದಲಿಗೆ ಅವರ ಸಮಾಧಿಯ ಬಳಿಯಾದರೂ ಸ್ಥಾಪಿಸುವ ಮೂಲಕ ಅವರಿಗೆ ಗೌರವ ಸಮರ್ಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.