ಟಿ.ಮರಿಯಪ್ಪ ಜನಸ್ನೇಹಿ ರಾಜಕಾರಣಿ: ಮಾಜಿ ಸಚಿವ ಎಚ್.ಎಂ.ರೇವಣ್ಣ ಬಣ್ಣನೆ

Former minister T. Mariappa memorial program Mandya
Published on

ಮಂಡ್ಯ: ಇತ್ತೀಚಿನ ವರ್ಷದಲಿ ರಾಜಕಾರಣಿಗಳು ಮೊದಲು ಎಂಎಲ್‌ಎ ಆಗಬೇಕು, ನಂತರ ಮಂತ್ರಿ, ಆಮೇಲೆ ಇಂತಹ ಖಾತೆಯೇ ಬೇಕೆಂದು ಪಟ್ಟು ಹಿಡಿಯುತ್ತಾರೆ. ಆದರೆ ಟಿ.ಮರಿಯಪ್ಪ ಜನಸ್ನೇಹಿ ರಾಜಕಾರಣಿಯಾಗಿದ್ದರು. ಮುಖ್ಯವಾಗಿ ‘ಹೋಂ ಲೆಸ್ ಮಿನಿಸ್ಟರ್’ ಆಗಿದ್ದರು ಎಂಬುದು ಆಶ್ಚರ್ಯವಾಗುತ್ತದೆ ಎಂದು ಮಾಜಿ ಸಚಿವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಶ್ಲಾಘಿಸಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಸಿದ್ದ ಮೈಸೂರು ಚಲೋ ಅಥವಾ ಅರಮನೆ ಚಲೋ ಚಳವಳಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಸಚಿವ ಟಿ.ಮರಿಯಪ್ಪ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂದೆ ಮುಖ್ಯಮಂತ್ರಿ, ಮಗ ಶಾಸಕನಾಗುವ ಪರಿಸ್ಥಿತಿಯಿದೆ. ಆದರೆ ಹಿಂದಿನವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ ಹೊರತು ತಮ್ಮ ಮನೆ ಕೆಲಸಕ್ಕೆ ಅಲ್ಲ. ಒಮ್ಮೆ ಟಿ.ಮರಿಯಪ್ಪ ಅವರ ಆರೋಗ್ಯ ಕೆಟ್ಟಾಗ ಮಹಾರಾಜರು ನಿಮಗೆ ನಿವೇಶನ ಕೊಡುತ್ತೇವೆ, ಮನೆ ಕಟ್ಟಿಕೊಳ್ಳಿ ಎಂದಾಗ ಬೇಡ ಎನ್ನುತ್ತಾರೆ. ಆದರೆ ಪ್ರಸ್ತುತದಲ್ಲಿ ನಿವೇಶನದ ಜಗಳವೇ ಸದ್ದು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕೆ.ಎಸ್.ನರಸಿಂಹಸ್ವಾಮಿ, ಟಿ.ಮರಿಯಪ್ಪ ಅವರು ವಾಸವಿದ್ದ ಮನೆಯನ್ನು ಪಾರಂಪರಿಕ ಕಟ್ಟಡವನ್ನಾಗಿ ಮಾಡುವ ಮೂಲಕ ವಸ್ತು ಸಂಗ್ರಹಾಲಯವಾಗಿ ಮಾಡುವ ಬಗ್ಗೆ ಎನ್.ಎಸ್.ರಂಗರಾಜು ಅವರು ಉತ್ತಮ ಸಲಹೆ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಗಮನಕ್ಕೆ ತಂದು ಎಲ್ಲರ ಸಹಕಾರದೊಂದಿಗೆ ಕಾರ್ಯಗತಗೊಳಿಸೋಣ. ಮರೆಯಾಗುತ್ತಿರುವ ಮಹನೀಯರನ್ನು ಮತ್ತೆ ವೇದಿಕೆಗೆ ನೆನಪಿನ ಮೂಲಕ ತರೋಣ ಎಂದು ಕರೆ ನೀಡಿದರು.

ಮೈಸೂರು ಚಲೋ ಚಳವಳಿ ಐತಿಹಾಸಿಕ ಮಹತ್ವ ಕುರಿತು ಮೈಸೂರು ಮಾನಸ ಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು ಮಾತನಾಡಿ, ಪುರಾತತ್ವ ಇಲಾಖೆಯಲ್ಲಿ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಸಾಕಷ್ಟು ಹಣವಿದೆ. ಈಗಾಗಲೇ ಮೈಸೂರಿನಲ್ಲಿ ಆರ್.ಕೆ.ನಾರಾಯಣ್ ಮತ್ತು ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಅದರಂತೆ ಟಿ.ಮರಿಯಪ್ಪ ಅವರ ಮನೆಯನ್ನು ವಸ್ತು ಸಂಗ್ರಹಾಲಯ ಮಾಡಬೇಕು. ಜತೆಗೆ ಈಗ ಪ್ರಕಟವಾಗಿರುವ ವಿಷಯ ವಿಶೇಷ ವಿಶ್ವಕೋಶದಲ್ಲಿ ಟಿ.ಮರಿಯಪ್ಪ ನವರ ಬಗ್ಗೆ ಹೆಚ್ಚಿನ ವಿಷಯ ಇರಬೇಕಿತ್ತು. ಮೈಸೂರು ಚಲೋ ಒಂದು ಅದ್ಭುತ ಚಳವಳಿ. ಮುಮ್ಮಡಿ ಅವರ ಕಾಲದಲ್ಲಿ ಸಾಗರ ದಂಗೆ ಕ್ರಾಂತಿ ನಡೆದ ನಂತರ ನಡೆದ ಮೈಸೂರು ಚಳವಳಿ ಅದ್ಭುತವಾದದ್ದು ಎಂದು ವಿವರಿಸಿದರು.

ಟಿ.ಮರಿಯಪ್ಪ ವ್ಯಕ್ತಿ-ವ್ಯಕ್ತಿತ್ವ ಹಾಗೂ ಸಾಧನೆ ಕುರಿತು ವಕೀಲ ನಾಗಮಂಗಲ ಜೀರಹಳ್ಳಿ ರಮೇಶಗೌಡ ವಿಷಯ ಮಂಡಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಲ್.ಮಹಾದೇವ ಅಧ್ಯಕ್ಷತೆ ವಹಿಸಿದ್ದರು. ಟಿ.ಮರಿಯಪ್ಪ ಅವರ ಪುತ್ರ ಟಿ.ಎಂ.ರಾಜಕುಮಾರ, ಮಾಜಿ ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಆರ್‌ಟಿಒ ನೌಕರರ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಎಚ್.ಡಿ.ಸೋಮಶೇಖರ್, ಕೋಣನಹಳ್ಳಿ ಜಯರಾಂ, ಮಂಜುಳಾ ಉದಯಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net