ಯೋಜನೆ ಸಂಪೂರ್ಣ ಕೈಬಿಡೋವರೆಗೂ ಹೋರಾಟ ನಿಲ್ಲದು

181
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಕಾಮಗಾರಿ ಸ್ಥಗಿತಗೊಳಿಸಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಂಪೂರ್ಣ ಯೋಜನೆ ಕೈಬಿಡಬೇಕು ಎಂದು ಮಾಜಿ ಸಚಿವ ಶಶಿಕಾಂತ ನಾಯಕ ಆಗ್ರಹಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನೀರು, ನಮ್ಮ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಿ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಮಾರ್ಚ್ 5ರವರೆಗೆ ಗಡುವು ಕೊಟ್ಟಿದ್ದೆವು. ಈ ಹಿನ್ನೆಲೆ ಜಿಲ್ಲಾಡಳಿತವು ಪೈಪ್‌ಲೈನ್ ಕಾಮಗಾರಿ ಸ್ಥಗಿತಗೊಳಿಸಿ ಯೋಜನೆ ಪರಿಶೀಲನೆ ನಡೆಸುತ್ತಿದೆ. ಈ ಹಿನ್ನೆಲೆ ಮಾರ್ಚ್ 5ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಮಾತ್ರ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ ಅಷ್ಟೇ. ನಮ್ಮ ಕಾನೂನು ಹೋರಾಟ ನಿರಂತರವಾಗಿರಲಿದೆ ಎಂದರು.

ನಮ್ಮ ನೀರು, ನಮ್ಮ ಹಕ್ಕು ಹೋರಾಟ ಸಮಿತಿ ಮುಖಂಡ ಸುಜಿತ್ ಮುಳಗುಂದ ಮಾತನಾಡಿ, ಹುಬ್ಬಳ್ಳಿ -ಧಾರವಾಡದ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಮ್ಮ ಸಮಾಧಾನಗೊಳಿಸಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರಬಹುದು. ಆದರೆ, ಪ್ರತಿಭಟನೆಯಿಂದ ಹಿಂದಕ್ಕೆ ಸರಿದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ಈ ಯೋಜನೆ ರದ್ದಾಗುವವರೆಗೂ ಎಲ್ಲರೂ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು. ರೈತ ಮುಖಂಡ ಸಿದ್ದನಗೌಡ ಮೋದಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net