ಮತೀಯ ಸಂಘರ್ಷ ತಡೆಗೆ ಎಸ್‌ಐಟಿ - ಮಾಜಿ ಸಚಿವ ರಮಾನಾಥ ರೈ ಆಗ್ರಹ

BRamanathRaiVb_vb_17
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪಾಯಕಾರಿ ಮತೀಯ ಸಂಘರ್ಷ ತಡೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕುಡುಪು ಬಳಿ ನಡೆದ ಗುಂಪು ಹಲ್ಲೆ ಬಳಿಕ ನಡೆದಿರುವ ಹತ್ಯೆ ಖಂಡನೀಯ. ಇದರ ಹಿಂದೆ ಮತೀಯವಾದಿಗಳ ಶಕ್ತಿ ಇದೆ. ಎಸ್‌ಐಟಿ ರಚಿಸಿ ತನಿಖೆ ನಡೆಸಿ, ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ನೆಲೆಗೊಳ್ಳುವಂತೆ ಮಾಡಬೇಕು ಎಂದರು.

ಕಾಂಗ್ರೆಸ್ ನಾಯಕರ ನಿಯೋಗ ಶೀಘ್ರದಲ್ಲೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಮತೀಯ ಸಂಘರ್ಷದ ಬಗ್ಗೆ ವಿವರಿಸಿ, ಎಸ್‌ಐಟಿ ರಚನೆಗೆ ಒತ್ತಾಯ ಮಾಡಲಾಗುವುದು. ಜಿಲ್ಲೆಯಲ್ಲಿ ರಾಜಕೀಯ ದುಷ್ಟಶಕ್ತಿಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇದರಿಂದ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು.

ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರಂಭದಲ್ಲಿ ಕೈಗೊಂಡ ತನಿಖೆ ತಡವಾಗಿರುವುದು ನಿಜ. ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶವಾಗಿರುವುದರಿಂದ ಸರ್ಕಾರ ದಕ್ಷ, ಸಮರ್ಥ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ರೈ ಆಗ್ರಹಿಸಿದರು.

ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಅಶ್ರಫ್ ಕೆ., ಮುಖಂಡರಾದ ಶಾಹುಲ್ ಹಮೀದ್, ಯೋಗೀಶ್, ಪಿಯೂಸ್, ಮಂಜುಳಾ ನಾಯಕ್, ಬೇಬಿ ಕುಂದರ್, ಇಬ್ರಾಹಿಂ, ನಿತ್ಯಾನಂದ ಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net