

ಮಂಡ್ಯ: ಕಾಂಗ್ರೆಸ್ ಸರ್ಕಾರದ ಹಗರಣದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡದಿದ್ದಕ್ಕೆ ಮಾತ್ರ ನಾವು ಬೀದಿಗೆ ಬಂದು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ‘ಜನವಿರೋಧಿ ಕಾಂಗ್ರೆಸ್’ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಹಗರಣಗಳ ಅನಾವರಣ 25 ಪುಟಗಳ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ನಿಲುವಳಿ ಸೂಚಿಸುವುದು ಒಂದು ಬ್ರಹ್ಮಾಸ್ತ್ರ. ವಾಲ್ಮೀಕಿ ಹಗರಣದ ಬಗ್ಗೆ ನಿಲುವಳಿ ಸೂಚನೆ ತಂದೆವು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಉತ್ತರ ಕೊಟ್ಟು, ನಿಮ್ಮ ಬಾಯಿ ಮುಚ್ಚಿಸುವಷ್ಟು ನಮ್ಮ ಹತ್ತಿರ ದಾಖಲೆಗಳಿವೆ ಎಂದರು. ನಾನು 3 ಗಂಟೆ 15 ನಿಮಿಷ ಮಾತಾಡಿ 50 ಪುಟಗಳ ಸಮಗ್ರ ದಾಖಲೆ ಕೊಟ್ಟಿದ್ದೇನೆ. 178 ಕೋಟಿ ರೂ ಡೆಪಾಸಿಟ್ ಮಾಡುವುದು, ಲೋನ್ ತೆಗೆದುಕೊಂಡು ವಂಚಿಸಲಾಗಿದೆ. ಶಾಸಕ ತಪ್ಪು ಮಾಡಿಲ್ಲ ಎಂದ ಮೇಲೆ ಜೈಲಿಗೆ ಏಕೆ ಹೋದರು. ಆದರೆ ಸರ್ಕಾರ ಚರ್ಚೆಗೆ ತಯಾರಿಲ್ಲ ಎಂದರು.
ಆಡಳಿತ ಸರ್ಕಾರ ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ತೊಡಗಿದ್ದರೆ ಅದನ್ನು ಜನರ ಮುಂದೆ ಇಡಲು ಪ್ರತಿಪಕ್ಷದವರು ಪಾದಯಾತ್ರೆ ನಡೆಸುವುದು ಅವರ ಹಕ್ಕು. ಆದರೆ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದವರೇ ಬೀದಿಗಿಳಿದು ಪ್ರತಿ ಪಕ್ಷದವರ ರೀತಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ಅಗತ್ಯ ದಾಖಲೆಗಳನ್ನು ನೀಡಿ ವಿಧಾನಸೌಧದಲ್ಲಿ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ತಮ್ಮ ಸರ್ಕಾರ ಪಾರದರ್ಶಕತೆಯಿಂದ ಇದೆ ಎನ್ನುವುದನ್ನು ಸಾಬೀತುಪಡಿಸಿಕೊಳ್ಳಬೇಕು. ಅದು ಬಿಟ್ಟು ಬೀದಿಗೆ ಬಂದು ನಾನು ಕಳ್ಳ ಅಲ್ಲ ಎಂದು ಹೇಳಿದರೆ ಅರ್ಥವಿದೆಯೇ?, ವಿರೋಧ ಪಕ್ಷದವರಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಕಲಿಯಲು ಈ ರೀತಿ ನಡೆದುಕೊಳ್ಳುತ್ತಿರುವಂತೆ ಕಾಣುತ್ತದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್, ಮಾಧ್ಯಮ ಸಂಚಾಲಕ ನಾಗೇಶ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಯ್ಯ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ಸಂಚಾಲಕ ನಾಗಾನಂದ್ ಇದ್ದರು.