ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸಿದ ನಾಯಕ ಅಂಬೇಡ್ಕರ್; ಮಾಜಿ ಸಚಿವ ಎನ್.ಮಹೇಶ್ ಅಭಿಮತ

New Project
Published on

ಬೆಂಗಳೂರು: ಶೋಷಿತರನ್ನು ರಾಷ್ಟ್ರದ ಮುಖ್ಯವಾಹಿನಿಗೆ ತರುವುದಕ್ಕಾಗಿ ಮತ್ತು ರಾಷ್ಟ್ರದ ಐಕ್ಯತೆಗಾಗಿ ಶ್ರಮಿಸಿದ ಮಹಾನ್ ನಾಯಕ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಮಾಜಿ ಸಚಿವ ಎನ್.ಮಹೇಶ್ ಅಭಿಪ್ರಾಯಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ಘಟಕವು ಭಾನುವಾರ ಕೆಎಲ್ಇ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವ ಸಮುದಾಯದಲ್ಲಿ ಎಷ್ಟೇ ದೊಡ್ಡ ಸಮಾಜ ಸುಧಾರಕ ಜನಿಸಿದರೂ, ಸಮಾಜ ಅವರನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಅಂಬೇಡ್ಕರ್ ಅವರು ಮಾಡಿದ ಹೋರಾಟಗಳೂ ಕೂಡ ಅಂದಿನ ಸಮಾಜದಿಂದ ಟೀಕೆ ಟಿಪ್ಪಣಿಗಳಿಗೆ ಒಳಗಾಗಿದ್ದವು. ಆದರೆ ಎಲ್ಲಾ ವಿರೋಧಗಳನ್ನು ಎದುರಿಸಿ ಅಂಬೇಡ್ಕರ್ ಅವರು ರಾಷ್ಟ್ರಕಟ್ಟುವ ಕೆಲಸಕ್ಕೆ ಮುಂದಾದರು. ನಾನು ಮೊದಲು ಭಾರತೀಯ ಆನಂತರವೂ ಭಾರತೀಯ ಎಂದು ಹೇಳಿದ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ನಮ್ಮ ದೇಶದಲ್ಲಿ ಸುಮಾರು 6000 ಜಾತಿಗಳಿವೆ. ಜಾತಿಗಳು ಸೃಷ್ಟಿಯಾಗಿರುವುದು ತಪ್ಪಲ್ಲ. ಆದರೆ ಜಾತಿಯಾಧಾರಿತವಾಗಿ ಬಂದಿರುವ ತಾರತಮ್ಯ ತಪ್ಪು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಎಷ್ಟೇ ಶೋಷಣೆಗೆ ಒಳಗಾದರೂ ರಾಷ್ಟ್ರದ ವಿರುದ್ಧ ಕೆಲಸ ಮಾಡುವವರೊಂದಿಗೆ ಕೈ ಜೋಡಿಸುವುದು ಸರಿಯಲ್ಲ ಎನ್ನುವುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಧರ್ಮ ಮತ್ತು ಮತಾಧಾರಿತವಾಗಿ ರಾಷ್ಟ್ರ ವಿಭಜನೆಗೊಂಡಾಗ ಹಿಂದೂ ಮತ್ತು ಮುಸಲ್ಮಾನರ ಸಂಪೂರ್ಣ ಜನಸಂಖ್ಯೆ ವಿನಿಮಯವಾಗಬೇಕೆಂದು ಅಂಬೇಡ್ಕರ್ ತಿಳಿಸಿದ್ದರು. ಆದರೆ ವಿಭಜನೆಗೊಂಡ ನಂತರವೂ ಈ ನಾಡಿನಲ್ಲಿ ಉಳಿದುಕೊಂಡಿರುವ ಮುಸಲ್ಮಾನರಿಗೆ ಯಾವುದೇ ತೊಂದರೆಯಾಗದ ರೀತಿ ನೋಡಿಕೊಳ್ಳುತ್ತಿದ್ದೇವೆ. ಇಲ್ಲಿ ಉಳಿದುಕೊಂಡಿರುವ ಮುಸಲ್ಮಾನರು ಇಲ್ಲಿನ ಮೂಲನಿವಾಸಿಗಳು ಎನ್ನುವುದನ್ನು ಅರಿತು ಈ ನಾಡಿಗೆ ನಿಷ್ಠರಾಗಿರಬೇಕು ಎಂದು ಅವರು ಸಲಹೆ ನೀಡಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿಂತಕರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net