ಸಂಶೋಧಕರು ಮಾನವೀಯತೆ ಮರೆಯದಂತೆ ಎಂ.ಆರ್.ಸೀತಾರಾಮ ಸಲಹೆ

RIT
Published on

ಬೆಂಗಳೂರು: ತಂತ್ರಜ್ಞಾನ ಬೆಳೆದಂತೆಲ್ಲಾ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಆತಂಕ ಎದುರಾಗುತ್ತಿದ್ದು, ಹೊಸ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸುವ ಸಂಶೋಧಕರು ಮಾನವೀಯತೆಯನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಬೇಕು ಎಂದು ಎಂದು ಮಾಜಿ ಸಚಿವ ಹಾಗು ಗೋಕುಲ ಎಜುಕೇಶನ್ ಫೌಂಡೇಶನ್ ಉಪಾಧ್ಯಕ್ಷ ಎಂ.ಆರ್.ಸೀತಾರಾಮ ಹೇಳಿದ್ದಾರೆ.

ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ (ಆರ್‌ಐಟಿ) ಆಯೋಜಿಸಿರುವ 2 ದಿನಗಳ 5ನೇ ಅಂತರರಾಷ್ಟ್ರೀಯ ಸರ್ಕ್ಯೂಟ್, ಕಂಟ್ರೋಲ್, ಕಮ್ಯುನಿಕೇಶನ್ ಮತ್ತು ಕಂಪ್ಯೂಟಿಂಗ್ (ಐ4ಸಿ-2024) ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೊಸ ಸಂಶೋಧಕರಿಗೆ, ವಿಜ್ಞಾನಿಗಳಿಗೆ ವೇದಿಕೆ ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಆರ್‌ಐಟಿ ಇಂತಹ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ದೇಶ ಮತ್ತು ವಿದೇಶದ ಸಂಶೋಧಕರು, ವಿಜ್ಞಾನಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಇಲ್ಲಿ ಮಂಡನೆಯಾಗುವ ಸಂಶೋಧನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆರ್‌ಐಟಿ ದೇಶದಲ್ಲೇ ಗುಣಮಟ್ಟದ ತಂತ್ರಜ್ಞಾನ ಶಿಕ್ಷಣ ನೀಡಲು ನಿರಂತರ ಶ್ರಮಿಸುತ್ತಿದೆ.

ಕಳೆದ 25 ವರ್ಷಗಳ ಹಿಂದೆ ಸೈಬರ್ ಕ್ರೈಮ್ ಇರಲಿಲ್ಲ. ಈಗ ಸೈಬರ್ ಕ್ರೈಮ್ ಹೆಚ್ಚುತ್ತಿದೆ ಇದಕ್ಕೆ ಕಾರಣ ತಂತ್ರಜ್ಞಾನದಲ್ಲಿ ಆಗಿರುವ ಅಮೂಲಾಗ್ರ ಅಭಿವೃದ್ಧಿ. ಯಾವುದೇ ಹೊಸ ತಂತ್ರಜ್ಞಾನ ಆವಿಷ್ಕಾರಗೊಂಡರು ಅದರಲ್ಲಿ ಹ್ಯೂಮನ್ ಎರರ್ ಇದ್ದೇ ಇರುತ್ತದೆ. ತಂತ್ರಜ್ಞಾನ ಎಂದರೆ ಕೇವಲ ಒಂದು ಸಂಶೋಧನೆಯಲ್ಲ, ಬದಲಾಗಿ ಅದು ಮಾನವೀಯ ಸಮಾಜದ ನಿರ್ಮಾಣ ಆ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಸಂಶೋಧಕರು, ವಿಜ್ಞಾನಿಗಳು ತಮ್ಮ ಸಂಶೋಧನೆಗೂ ಮುನ್ನ ಮಾನವೀಯತೆಯ ಬಗ್ಗೆ ಗಮನ ನೀಡಬೇಕಾದ ಅವಶ್ಯಕತೆ ಇದೆ ಎಂದು ಎಂ.ಆರ್.ಸೀತಾರಾಮ್ ಕಳಕಳಿ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿ-ಡಾಟ್ ಸಂಸ್ಥೆಯ ನಿರ್ದೇಶಕ ಡಾ.ದಿಲೀಪ್ ಕೃಷ್ಣಸ್ವಾಮಿ, ಐಐಎಸ್‌ಸಿ ಪ್ರಾಧ್ಯಾಪಕ ಪ್ರೊ.ಶಂತನು ಮಹಾಪಾತ್ರ, ಗೋಕುಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಆರ್.ರಾಮಯ್ಯ, ಸಲಹೆಗಾರ ಡಾ.ಕರಿಸಿದ್ಧಪ್ಪ, ಜಿ.ರಾಮಚಂದ್ರ, ಡಾ. ಪಾರ್ಶ್ವನಾಥ, ಡಾ.ಎನ್.ವಿ.ಆರ್.ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ದೇಶ ವಿದೇಶಗಳಿಂದ 100ಕ್ಕೂ ಹೆಚ್ಚು ಸಂಶೋಧಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ಎರಡು ದಿನಗಳ ಸಮ್ಮೇಳನದಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net