

ಹೊನ್ನಾಳಿ: ನಾಡಿನ ಮಠಮಾನ್ಯರು ಅನ್ನ ಮತ್ತು ಜ್ಞಾನ ದಾಸೋಹ ಮಾಡುತ್ತಾ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಂತಿರುವುದರಿಂದಲೇ ಇಂದು ಬಡತನ ರೇಖೆಯಲ್ಲಿದ್ದ ಎಷ್ಟೋ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಭಾನುವಾರ ತಾಲೂಕು ಬೇಡಜಂಗಮ ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಹಾಗೂ ಸರ್ಕಾರಿ ನೌಕರರಿಗೆ ಗುರುರಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲ ಸಮಾಜದವರು ಬೇಡ ಜಂಗಮರನ್ನು ಗೌರವದಿಂದ ಕಾಣುತ್ತಾರೆ. ಪಾಲಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ ಮಕ್ಕಳು ಉನ್ನತ ವ್ಯಾಸಂಗ ಪಡೆಯಲು ಸಾಧ್ಯವಾಗುತ್ತದೆ. ಜತೆಗೆ ಸಂಸ್ಕಾರ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಸನ್ಮಾರ್ಗದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತದೆ ಎಂದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳ ಸುಪ್ತ ಪತ್ರಿಭೆಯನ್ನು ಹೆಕ್ಕಿ ತೆಗೆಯುವುದು ಪಾಲಕರ ಕರ್ತವ್ಯವಾಗಿದ್ದು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಇದೆಯೋ ಅದನ್ನು ಸಾಧಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಲಿಂ. ಚಂದ್ರಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಹೊನ್ನಾಳಿಯಲ್ಲಿ ಎರಡು ದಶಕಗಳ ಹಿಂದೆ ಯುಗಮಾನೋತ್ಸವ ನಡೆದಾಗ ಪಂಚಚಾರ್ಯರು ಒಂದೇ ವೇದಿಕೆಯಲ್ಲಿ ಉಪಸ್ಥಿತಿ ಇದ್ದು ಎಲ್ಲರಿಗೂ ಆಶೀರ್ವಚನ ನೀಡಿದ್ದರು. ಅದಾದ ನಂತರ ಈಗ ಮತ್ತೆ ದಾವಣಗೆರೆಯಲ್ಲಿ ಶೃಂಗ ಸಮ್ಮೇಳನದಲ್ಲಿ ಪಂಚಾಚಾರ್ಯರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಚನ ನೀಡುತ್ತಿರುವುದು ಸಂತಸದ ವಿಚಾರ ಎಂದರು.
ಕಡೆ ನಂದಿಹಳ್ಳಿ ಮಠದ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಲಿಯುಗದಲ್ಲಿ ಸಂಘಟನೆ ಇದ್ದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಹಾಗೆಯೇ ಧರ್ಮಕ್ಕಾಗಿ ಕೆಲಸ ಮಾಡಬೇಕೆಂಬ ಅನಿವಾರ್ಯತೆ ಬಂದರೆ ಎಲ್ಲರೂ ಧರ್ಮದ ಪರವಾಗಿ ಕೆಲಸ ಮಾಡಲು ಸಿದ್ಧರಾಗಬೇಕು ಎಂದು ತಿಳಿಸಿದರು.
ಗೋವಿನಕೋವಿ ಹಾಲಸ್ವಾಮೀಜಿ ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿ, ರಾಂಪುರ ಹಾಲಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ, ಕತ್ತಿಗೆಮಠದ ಚನ್ನಪ್ಪ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ವಾಗೀಶ ಸ್ವಾಮಿ, ತಾಲೂಕಾಧ್ಯಕ್ಷ ಬೈರನಹಳ್ಳಿ ಎಂ. ಪಂಚಾಕ್ಷರಯ್ಯ, ನಿವೃತ್ತ ಶಿಕ್ಷಕ ರುದ್ರಯ್ಯ ಮಾತನಾಡಿದರು.
ಎ.ಎಂ. ಚಂದ್ರಯ್ಯ, ರೇವಣಸಿದ್ದಯ್ಯ, ಪತ್ರೇಶ್, ಶಿವಕುಮಾರಸ್ವಾಮಿ, ಪತ್ರಕರ್ತ ಹೊಳೆಮಠಶಾಸ್ತ್ರಿ, ಎಂ.ಎಸ್. ಪ್ರಕಾಶ್ ಇತರರು ಇದ್ದರು.