ಕೊರವೇ ಅಭಿಯಾನಕ್ಕೆ ಮಾಜಿ ಸಚಿವ ಜೀವಿಜಯ ಬೆಂಬಲ

MDK05
Published on

ಮಡಿಕೇರಿ: ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ಆರಂಭಿಸಿರುವ ಬೃಹತ್ ಅಭಿಯಾನಕ್ಕೆ ಮಾಜಿ ಸಚಿವ ಬಿ.ಎ.ಜೀವಿಜಯ ಬೆಂಬಲ ಸೂಚಿಸಿದರು.


ತಮ್ಮ ನಿವಾಸಕ್ಕೆ ಅಭಿಯಾನದ ಭಾಗವಾಗಿ ಭೇಟಿ ನೀಡಿದ ಕೊರವೇ ಪ್ರಮುಖರೊಂದಿಗೆ ಚರ್ಚಿಸಿದ ಅವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕುರಿತು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.


ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಕೊಡಗಿನ ಯುವಜನರ ಬೇಡಿಕೆ ಸಮಯೋಚಿತವಾಗಿದ್ದು, ಕೊಡಗು ರಕ್ಷಣಾ ವೇದಿಕೆಯ ಅಭಿಯಾನಕ್ಕೆ ನಾನು ಕೂಡ ಕೈಜೋಡಿಸುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.


ಕೊರವೇ ಅಧ್ಯಕ್ಷ ಅಚ್ಚಂಡಿರ ಪವನ್ ಪೆಮ್ಮಯ್ಯ ಮಾತನಾಡಿ, ನಿತ್ಯ ಅಪಘಾತ, ವನ್ಯಜೀವಿಗಳ ದಾಳಿ, ವಿದ್ಯುತ್ ಆಘಾತಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸುವಾಗ ಗಂಭೀರವಾಗಿ ಗಾಯಗೊಳ್ಳುವವರನ್ನು ಮತ್ತು ಹೃದಯಾಘಾತಕ್ಕೊಳಗಾದವರನ್ನು ಮೈಸೂರು, ಬೆಂಗಳೂರು, ಮಂಗಳೂರು ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಆದ್ದರಿಂದ ಅತಿ ಶೀಘ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯೋಜನೆ ಜಾರಿಯಾದಲ್ಲಿ ಕೊಡಗಿನ ಜನ ನಿಟ್ಟುಸಿರು ಬಿಡಬಹುದಾಗಿದೆ. ಪಕ್ಷಾತೀತವಾಗಿ ಅಭಿಯಾನ ನಡೆಸುತ್ತಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.


ಬೇಡಿಕೆ ಈಡೇರುವಲ್ಲಿಯವರೆಗೆ ಅಭಿಯಾನ ಮುಂದುವರೆಯಲಿದೆ ಎಂದು ತಿಳಿಸಿದ ಅವರು, ಜೀವಿಜಯ ಅವರ ಬಳಿ ಬೆಂಬಲ ಕೋರಿದರು.


ಈ ಸಂದರ್ಭದಲ್ಲಿ ಕೊರವೇ ಜಿಲ್ಲಾ ನಿರ್ದೇಶಕ ಸುಲೇಮಾನ್, ಹೆಬ್ಬಾಲೆ ಘಟಕದ ಅಧ್ಯಕ್ಷ ಚಂದ್ರಕುಮಾರ್ ಪಟೇಲ್, ಕಾರ್ಯದರ್ಶಿ ಎಚ್.ಟಿ.ಪುನೀತ್, ಕಾರ್ಯಕರ್ತ ಅವಿನಾಶ್ ಹಾಗೂ ವೇದಿಕೆಯ ಹಿತೈಷಿ ನಾಗೇಶ್ ಈ ಸಂದರ್ಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net