ಡಿಜಿಟಲ್ ವ್ಯವಹಾರ 24 ಲಕ್ಷ ಕೋಟಿ ರೂ.ಗೆ ಏರಿಕೆ

Untitled design (18)
Published on

ಯಲಬುರ್ಗಾ: ಭಾರತವನ್ನು ಜಗತ್ತೇ ಗುರುತಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದರು. ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕತೆ 2 ಟ್ರಿಲಿಯನ್‌ನಿಂದ 4 ಟ್ರಿಲಿಯನ್‌ಗೆ ಏರಿದ್ದು, ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. 2014 ರಿಂದ ದೇಶದಲ್ಲಿ ಸಮರ್ಥ ಸರ್ಕಾರದಿಂದ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯಾಗಿದೆ. ದೇಶದಲ್ಲಿ ಬಡತನ ಸಂಖ್ಯೆ ಕಡಿಮೆ ಆಗಿದೆ. ರಕ್ಷಣಾ ವಲಯದಲ್ಲಿ ಮೇಡ್ ಇನ್ ಇಂಡಿಯಾ ಅಡಿಯಲ್ಲಿ 5000 ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಕಡು ಬಡತನ ಶೇ.21 ರಿಂದ ಶೇ.5ಕ್ಕೆ ಇಳಿದಿದೆ. 2026ಕ್ಕೆ ನಕ್ಸಲಿಸಂ ಸಂಪೂರ್ಣ ನಿರ್ಮೂಲನೆಯಾಗಲಿದೆ. ಡಿಜಿಟಲ್ ವ್ಯವಹಾರ 24 ಲಕ್ಷ ಕೋಟಿ ರೂ.ಗೆ ಏರಿದೆ ಎಂದರು.

ವಿಕಸಿತ ಭಾರತದ ಪ್ರಚಾರ ಚಾಲಕ ಸೋಮನಾಥ ಕುಲಕರ್ಣಿ ಮಾತನಾಡಿ, ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನ ಮತ್ತು ಉಗ್ರರಿಗೆ ಪಾಠ ಕಲಿಸಲಾಗಿದೆ. ಕ್ಷಿಪಣಿ ದಾಳಿ ಯಶಸ್ವಿಯಾಗಿವೆ. ಈ ಹಿಂದೆ ರಕ್ಷಣಾ ಕ್ಷೇತ್ರದಲ್ಲಿ ಉತ್ಪನ್ನಗಳ ಆಮದಾಗುತ್ತಿತ್ತು. ಈಗ ನಾವೇ 5000 ಉತ್ಪನ್ನಗಳನ್ನು ‘ಮೇಡ್ ಇನ್ ಇಂಡಿಯಾ’, ‘ಮೇಕ್ ಇನ್ ಇಂಡಿಯಾ’ದಡಿ ಉತ್ಪಾದಿಸುತ್ತಿದ್ದೇವೆ. 25,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮತ್ತಿತರ ಉತ್ಪನ್ನಗಳನ್ನು ರಫ್ತು ಮಾಡಿರುವುದು ದೇಶದಲ್ಲಿ ಇದೇ ಮೊದಲು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ ಮಾತನಾಡಿ, ದೇಶದಲ್ಲಿ 26 ಕೋಟಿ ಜನರು ಕಡುಬಡತನ ರೇಖೆಯಿಂದ ಹೊರಕ್ಕೆ ಬಂದಿದ್ದಾರೆ. ಇದು ವಿಶ್ವಬ್ಯಾಂಕ್‌ನ ಅಂಕಿ-ಅಂಶಗಳು. ರಕ್ಷಣಾ ವ್ಯವಸ್ಥೆ ಬಗ್ಗೆಯೂ ನಿರ್ಧಿಷ್ಟ-ದಿಟ್ಟ ಹೆಜ್ಜೆ ಇಡಲಾಗಿದೆ ಎಂದರು. ಮುಖಂಡರಾದ ಗೌತಮ್ ದೇಸಾಯಿ, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಶರಣಪ್ಪ ಇಳಗೇರ, ಶಿವಕುಮಾರ ನಾಗಲಾಪೂರ ಮಠ, ಅಮರೇಶ ಹುಬ್ಬಳ್ಳಿ, ಶರಣಪ್ಪ ಬಣ್ಣದಭಾವಿ, ಸಂತೋಷೀಮಾ ಜೋಶಿ, ಶಕುಂತಲಾ ಮಾಲಿಪಾಟೀಲ, ಸಿದ್ದು ಮಣ್ಣನವರ, ಶರಣಪ್ಪ ಬಣ್ಣದಬಾವಿ, ಲಕ್ಷ್ಮಣ್ಣ ಕಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net