

ಮಂಡ್ಯ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಯ ಮೊದಲ ಹಂತದ ಅವಧಿಯನ್ನು ಮೇ 25ರವರೆಗೆ ಹಾಗೂ ಆನ್‌ಲೈನ್‌ನ ಎರಡನೇ ಹಂತವು ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಚ್.ಆಂಜನೇಯ ತಿಳಿಸಿದರು.
ಮೇ 5ರಿಂದ ಜಾತಿಗಣತಿ ಪ್ರಾರಂಭವಾಗಿದೆ. ಆದರೆ ಮೇ 10ರವರೆಗೆ ಪಡೆದ ಗಣತಿಯ ಮಾಹಿತಿ ಸರಿಯಾಗಿ ಆಗದ ಕಾರಣ ಮತ್ತೇ ಆಧಾರ್‌ಕಾರ್ಡ್ ಪಡೆದು ಗಣತಿ ಮಾಡಲಾಗುತ್ತಿದೆ. ಗಣತಿಯ ವೇಳೆ ಸಮುದಾಯದವರು 42 ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಅದಕ್ಕೆ ಸರಿಯಾದ ಉತ್ತರ ಕೊಡಿ. ಸಮುದಾಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಮೀಸಲಾತಿ ಪಡೆದು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾದಿಗ ಸಮುದಾಯವರು ಅವಕಾಶ ವಂಚಿತರಾಗಿದ್ದು, ನೀಡಲಾಗಿರುವ ಮೀಸಲಾತಿಯು ಸಮುದಾಯದ ಜನಗಣತಿಗೆ ಅನುಗುಣವಾಗಿಲ್ಲ. ನಮ್ಮನ್ನಾಳುವ ಪಕ್ಷಗಳು ಅನ್ಯಾಯವೆಸಗಿದ್ದು, ಪ್ರತ್ಯೇಕ ಮೀಸಲಾತಿ ಮೂಲಕ ಸಮುದಾಯ ಅಭಿವೃದ್ಧಿಯಾಗಲಿದೆ ಎಂಬ ಅನುಕಂಪದ ಮಾತುಗಳನ್ನು ಮಾತ್ರ ಆಡುತ್ತಿವೆ. ಬಸವರಾಜ ಬೊಮ್ಮಾಯಿ ಸರ್ಕಾರ ಜಾತಿಗಣತಿಗೆ ಶಿಫಾರಸು ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ಘೋಷಣೆ ಮಾಡಿ, ಒಳಮೀಸಲಾತಿಗೆ ಇದ್ದ ಅಡೆತಡೆ ನಿವಾರಣೆಗೊಳಿಸಿ ದಿಟ್ಟ ನಿರ್ಧಾರ ಕೈಗೊಂಡು 2023ರ ಅ.28ರಂದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಿತು. 2024ರ ಆ.1ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಯ ಅಧಿಕಾರ ರಾಜ್ಯ ಸರ್ಕಾರಗಳಿಗಿವೆ ಎಂದ ಆದೇಶದ ಶಕ್ತಿಯಿಂದಾಗಿ ನಾಗಮೋಹನ್‌ದಾಸ್ ಏಕ ಸದಸ್ಯಪೀಠ ಆಯೋಗ ರಚಿಸಿದರು ಎಂದು ಹೇಳಿದರು.
ಸರ್ಕಾರ ಜಾತಿಗಣತಿ ಮಾಡುವುದು ಮಾತ್ರವಲ್ಲದೇ ಸರ್ಕಾರಿ ನೌಕರರ ಗಣತಿಯನ್ನೂ ಮಾಡುತ್ತಿದೆ. ಇಲ್ಲಿಯೂ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರ ಅಂಕಿಯನ್ನು ತಿಳಿಯುವ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲಿ ಒಳಮೀಸಲಾತಿಗೆ ಸರ್ಕಾರಿ ನೌಕರರ ಅಂಕಿ ಅಂಶ ಸಹಕಾರಿಯಾಗಲಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳ ಸಮೀಕರಣವು ಮೂಲ ಜಾತಿಗಳಿಗೆ ಅಪಾಯಕಾರಿ. ಮುಂದಿನ ದಿನಗಳಲ್ಲಿ ಜಾತಿ ಪಟ್ಟಿಯಲ್ಲಿ ಈ ಹೆಸರು ಕೈ ಬಿಡುವಂತೆ ಹೋರಾಟ ರೂಪಿಸಲಾಗುವುದು. ಬೇಡರ ಜಂಗಮರು ಪರಿಶಿಷ್ಟ ಜಾತಿಗೆ ನಮೂದಿಸಿಕೊಳ್ಳುತ್ತಿದ್ದು, ಜಂಗಮರೂ ಸಹ ಬೇಡರ ಜಂಗಮರೆಂದೇ ಹೇಳಿಕೊಳ್ಳುವ ಮೂಲಕ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಜಂಗಮರು ಬೇಡರ ಜಂಗಮರ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳು ಹಾಗೂ ಸರ್ಕಾರಿ ಹುದ್ದೆಗಳನ್ನು ಪಡೆದಿದ್ದು, ಈ ರೀತಿ ತಪ್ಪು ಜಾತಿ ನಮೂದಿಸುವ ಮೂಲಕ ಸರ್ಕಾರಿ ಉದ್ಯೋಗ ಪಡೆದ ಜಂಗಮರನ್ನು ಗುರುತಿಸಿ ಹುದ್ದೆಯಿಂದ ತೆರವುಗೊಳಿಸುವುದು ಮಾತ್ರವಲ್ಲದೇ ಅವರು ಪಡೆದ ಸವಲತ್ತುಗಳನ್ನು ಮುಟ್ಟುಗೋಲು ಹಾಕಬೇಕು. ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡರ ಜಂಗಮರನ್ನು ಕೈ ಬಿಡುವಂತೆ ಹೋರಾಟ ಮಾಡಲಾಗುವುದು. ಮೀಸಲಾತಿ ಪಡೆಯಲು ಸಮುದಾಯದವರು ಜಾತಿಗಣತಿ ಮಾಡುವವರೆಗೂ ಹೋರಾಟ ಮಾಡಿದ್ದು, ಇದೀಗ ಸಮೀಕ್ಷೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರಿಯಾದ ಮೀಸಲಾತಿ ಪಡೆಯಲು ಪರಿಶಿಷ್ಟ ಜಾತಿಯ ಎಲ್ಲ ಜಾತಿಗಳ ಸಮೀಕ್ಷೆ ಸರಿಯಾಗಿ ನಡೆಯುವತ್ತಾ ಗಮನಹರಿಸಿ ಹೋರಾಟ ಮುಂದುವರೆಸಬೇಕು. ಈ ಮೂಲಕ ನ್ಯಾಯಯುತ ಮೀಸಲಾತಿ ಪಡೆಯಲು ಜಾಗೃತ ವಹಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಧರ್ಮಸೇನ, ಎಚ್.ಸಿ.ಶ್ಯಾಮಪ್ರಸಾದ್, ಮುನಿರಾಜ್, ಪ್ರಸಾದ್, ಸಿ.ಕೆ.ಪಾಪಯ್ಯ, ಎನ್.ಆರ್.ಚಂದ್ರಶೇಖರ್ ಇತರರಿದ್ದರು.