

ಯಾದಗಿರಿ: ರಾಜ್ಯ ಸರ್ಕಾರ ಕೋವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಸಾವಿರಾರು ಕೋಟಿ ರೂ.ದುರುಪಯೋಗ ಪಡಿಸಿಕೊಂಡಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಆರೋಪಿಸಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಸಕರ್ಾರ ಕೈಗೊಳ್ಳುವ ಪ್ರತಿಯೊಂದು ನಿರ್ಧಾರಗಳಿಗೆ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ರಾಜ್ಯದ ಶ್ರೀಸಾಮಾನ್ಯ ಈ ವೈರಸ್ನಿಂದ ಬಳಲು ಕೂಡದು ಎಂಬುದು ನಮ್ಮ ಪಕ್ಷದ ಕಾಳಜಿಯಾಗಿದೆ. ಹೀಗಾಗಿ ಸರ್ಕಾರದ ಎಲ್ಲ ಕ್ರಮಗಳಿಗೆ ನಾವು ಸಹಕಾರ ಕೊಡುತ್ತಿದ್ದೇವೆ. ಆದರೆ ಭ್ರಷ್ಟಾಚಾರ ನಡೆಸಿದರೆ ಅದನ್ನು ಸಹಿಸಿಕೊಂಡು ಕೂಡುವುದು ನಮ್ಮಿಂದಾಗುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಕರೊನಾ ವೈರಸ್ ಹರಡುವ ಆರಂಭಿಕ ಹಂತದಲ್ಲಿ ಸಕರ್ಾರ ಪ್ರತಿ ಪಿಪಿಇ ಕಿಟ್ಗೆ 330 ರೂ.ಗಳಂತೆ 3.5 ಲಕ್ಷ ಕಿಟ್ಗಳನ್ನು ಖರೀದಿಸಿದೆ. ಆದರೆ ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಾನವಶಕ್ತಿ ಕಡಿಮೆಯಾದ ಕಾರಣ 750 ರೂ.ನಂತೆ ಕಿಟ್ ಖರೀದಿಸಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ ಸರ್ಕಾರ 11.5 ಕೋಟಿ ರೂ.ಖಚರ್ು ಮಾಡುವ ಬದಲಾಗಿ 25.3 ಕೋಟಿ ರೂ.ವೆಚ್ಚ ಮಾಡಿದೆ ಎಂದು ಆರೋಪಿಸಿದರು.
ಸ್ಯಾನಿಟೈಸರ್, ಮಾಸ್ಕ್ ಸೇರಿ ಮತ್ತಿತರ ಉಪಕರಣಗಳ ಖರೀದಿಯಲ್ಲಿ ಸರ್ಕಾರ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರ ನೀಡಿ ಖರೀದಿಸಿದ್ದು ಸರ್ಕಾರಕ್ಕೆ ಹೆಚ್ಚುವರಿಯಾಗಿ 2200 ಕೋಟಿ ರೂ.ಹಣ ಹೊರೆ ಬಿದ್ದಿದೆ. ಇದರಿಂದ ಮೇಲ್ನೋಟಕ್ಕೆ ಉಪಕರಣಗಳ ಖರೀದಿಯಲ್ಲಿ ಭಾರಿ ಗೋಲ್ಮಾಲ್ ನಡೆದಿರುವ ಬಗ್ಗೆ ಅನುಮಾನಗಳು ಮೂಡಿದ್ದು ಕೂಡಲೇ ಈ ಬಗ್ಗೆ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ ದ ಪ್ರತಿಯೊಂದು ಕ್ರಮಗಳಿಗೆ ಜನತೆ ಸಹಕಾರ ಕೊಟ್ಟಿದ್ದಾರೆ. ಈ ಸೋಂಕು ಹರಡುವ ಮುನ್ನ ಬಿಗಿಯಾದ ಕ್ರಮ ಕೈಗೊಂಡ ಸರ್ಕಾರ, ನಂತರದ ದಿನಗಳಲ್ಲಿ ಲಾಕ್ಡೌನ್ ಬಗ್ಗೆ ಬೇಜವ್ದಾರಿತನ ತೋರಿಸಿದರ ಪರಿಣಾಮವೇ ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟುತ್ತಿದೆ ಎಂದು ಹರಿಹಾಯ್ದರು.
ಶಾಸಕ ಶರಣಬಸಪ್ಪ ದರ್ಶನಾಪುರ, ಆನಂದ ನ್ಯಾಮಗೌಡ, ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಮಾಜಿ ಶಾಸಕ ಚೆನ್ನಾರಡ್ಡಿ ಪಟೀಲ್ ತುನ್ನೂರ, ಪ್ರಮುಖರಾದ ಶ್ರೀನಿವಾಸರಡ್ಡಿ ಕಂದಕೂರ, ಬಸರಡ್ಡಿ ಅನಪುರಮ ಶರಣಪ್ಪ ಡಿ.ಮಾನೇಗಾರ, ಟಿ.ಶಶಿಧರ, ರಾಘವೇಂದ್ರ ಮಾನಸಗಲ್, ಅವಿನಾಶ ಜಗನ್ನಾಥ ಇತರರು ಇದ್ದರು.