ನೂರು ದಿನದಲ್ಲಿ ನೂರಾರೂ ಹಗರಣ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ವಾಗ್ದಾಳಿ

Bjp Ex Ministers
Published on

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದೆ. ಆದರೆ ಈ ಅವಧಿಯಲ್ಲಿ ನೂರಾರು ಹಗರಣ ಮಾಡಿದ್ದು, ಇಂತಹ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ಮತ್ತು ಭ್ರಷ್ಟಾಚಾರದಿಂದಲೇ ರಾಜ್ಯ ಸರ್ಕಾರ ನಡೆಯುತ್ತಿದೆ. ಕಾವೇರಿ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿತು. ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸಿ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ತಂದಿದೆ ಎಂದರು.

ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ರೈತ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ಗೆ ರೈತ ವಿರೋಧಿ ಹಣೆಪಟ್ಟಿ ಮುಂದುವರೆಯುತ್ತಿದೆ. ನೀವು ಏನೇ ಹೇಳಿದರೂ ನಾವು ಮಾಡುವ ಕೆಲಸ ಮಾಡ್ತೇವೆ ಅಂತ ಮೊಂಡುತನ ಮಾಡುತ್ತಿದೆ. ತಮಿಳುನಾಡಿನ ಸಚಿವರಾದ ಉದಯ ನಿಧಿ ಹಾಗೂ ಪೊನ್‌ಮುಡಿ ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ಕೊಡುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಜನರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳೊದು ಗೊತ್ತು, ಬೆಳೆಸೋದು ಗೊತ್ತು. ಪ್ರತಿ ಕ್ಷೇತ್ರದಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಪಕ್ಷವನ್ನ ಮುಂದೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಎಲ್ಲ ಸವಾಲುಗಳನ್ನು ಸ್ವೀಕರಿಸಿ ಕೆಲಸ ಮಾಡುತ್ತೇವೆ ಎಂದ ಅವರು, ಬಿಜೆಪಿಯ 30ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿ, ಕಾಂಗ್ರೆಸ್ ಮುಳುಗುವ ದೋಣಿ. ಅದಕ್ಕೆ ದಿಕ್ಕಿಲ್ಲ, ನಾಯಕತ್ವ ಇಲ್ಲ. ಆ ಪಕ್ಷಕ್ಕೆ ಯಾರು ಹೋಗುತ್ತಾರೆ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸ್ಟ್ಯಾಟರ್ಜಿ ಇದೆ. ಮುಂದೆ ಆಯ್ಕೆ ಆಗಲಿದೆ ಎಂದರು.

ನೀರಿನ ವಿಚಾರದಲ್ಲಿ ಮೈಮರೆತಿದೆ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಕುಡಿಯುವ ನೀರಿನ ವಿಚಾರದಲ್ಲಿ ಮೈಮರೆತಿದೆ. ಆದರೂ ದುರಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ. ಇವರಿಗೆ ಕಿಂಚಿತ್ತೂ ರಾಜ್ಯದ ಮೇಲೆ ಕಾಳಜಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡದ ಇದೂ ಒಂದು ಸರ್ಕಾರವೇ ಎಂದು ಪ್ರಶ್ನಿಸಿದರು.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡಬಾರದಿತ್ತು. ತಮಿಳುನಾಡಿನವರ ಓಲೈಸಲು ಇವರೇ ನೀರು ಬಿಟ್ಟಿದ್ದಾರೆ. ಡಿಎಂಕೆ ಜತೆ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್, ಪ್ರಾಧಿಕಾರಕ್ಕೆ ವಾಸ್ತವ ಸ್ಥಿತಿ ಆರ್ಥ ಮಾಡಿಸುವ ಕೆಲಸವನ್ನ ರಾಜ್ಯ ಸರ್ಕಾರ ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ಯಾವತ್ತೂ ಕುಡಿಯುವ ನೀರಿನ ಅಭಾವ ಇರಲಿಲ್ಲ. ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ನೀರನ್ನ ಬಿಡಬೇಡಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೀವಿ. ಕೋರ್ಟ್‌ನಲ್ಲಿ ಸವಾಲುಗಳನ್ನ ಎದುರಿಸಬೇಕು. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಸೌಜನ್ಯವಾಗಿ ಈ ವಿಚಾರದಲ್ಲಿ ಮಾತನಾಡಿಲ್ಲ. ಕೇವಲ ದುರಹಂಕಾರದ ಮಾತುಗಳನ್ನ ಆಡುತ್ತಿದ್ದಾರೆ. ನೀರು ನಿರ್ವಹಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಗೂಬೆ ಕೂರಿಸೋಕೆ ಹೋಗಿ ಇವರೇ ಗೂಬೆಗಳಾಗಿದ್ದಾರೆ. ಪೆನ್ನು ಕೊಡಿ ಪೇಪರ್ ಕೊಡಿ ಅಂತಾ ಅಧಿಕಾರ ತೆಗೆದುಕೊಂಡರು. ಈಗ ಪೆನ್ನು ಪೇಪರನ್ನ ಜೇಬಲ್ಲಿ ಇಟ್ಕೊಂಡು ಓಡಾಡುತ್ತಿದ್ದಾರೆ. ಅಧಿಕಾರದ ಅಮಲಿನಲ್ಲಿ ಮೈಮರೆತಿದ್ದಾರೆ. 135 ಜನ ಗೆದ್ದಿದ್ದೀವೆಂದು ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಆದ್ದರಿಂದ ಭೂಮಿ ಮೇಲಿನ ನೀರಿನ ಸಮಸ್ಯೆ ಕಾಣ್ತಿಲ್ಲ ಎಂದು ಛೇಡಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಇಂಡುವಾಳು ಸಚ್ಚಿದಾನಂದ, ಸಿ.ಟಿ.ಮಂಜುನಾಥ್, ಚೇತನ್, ಮುನಿರಾಜು, ವಿವೇಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net