ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಕ್ರೋಶ

1
Published on

ಮಂಡ್ಯ: ಕಾವೇರಿ ನೀರು ಕೇವಲ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದ ಜೀವನಾಡಿಯಾಗಿದ್ದು, ಆದ್ದರಿಂದ ನೀರನ್ನು ಉಳಿಸಿಕೊಳ್ಳಬೇಕಾದರೆ ಜನಪ್ರತಿನಿಧಿಗಳೂ ಹೋರಾಟವನ್ನು ಕೈಗೆತ್ತಿಕೊಳ್ಳಬೇಕೆಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಗ್ರಹಿಸಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಅವರು, ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ. ಅಂತೆಯೇ ನನ್ನ ಜಿಲ್ಲೆಗೆ ಯಾವುದೇ ಹಂತದಲ್ಲೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.

ಕಾವೇರಿ ನದಿ ನೀರು ಸಂಬಂಧ ನಡೆದಿರುವ ಹೋರಾಟದಲ್ಲಿ ಮಾಜಿ ಸಂಸದ ದಿ.ಡಾ.ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿತ್ತು. ರೈತರ ಹೋರಾಟಕ್ಕೆ ನಮ್ಮ ಜಾತ್ಯಾತೀತ ಜನತಾದಳ ಬದ್ಧವಾಗಿದೆ. ಸೆ.2ರಂದು ನಮ್ಮ ಪಕ್ಷದ ವತಿಯಿಂದ ಬೃಹತ್ ಹೋರಾಟ ನಡೆಸುತ್ತಿದ್ದು, ರಾಜ್ಯ ಸರ್ಕಾರದ ಕಣ್ತೆರೆಸುವ ಕೆಲಸ ಮಾಡುತ್ತೇವೆ. ನಮ್ಮ ಹೋರಾಟದಲ್ಲಿ ಪಕ್ಷಾತೀತವಾಗಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗಿಯಾಗಿ ನ್ಯಾಯ ದೊರಕಿಸಿಕೊಡಬೇಕು. ಸಂಸದರು ಸಹ ಹೋರಾಟಕ್ಕಿಳಿಯಲಿ. ಶನಿವಾರ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಅತಿ ಹೆಚ್ಚಿನ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಪಕ್ಷದ ಬಿಡುತ್ತೇನೆನ್ನುವುದು ಸುಳ್ಳು: ನಾನು ಜೆಡಿಎಸ್ ತ್ಯಜಿಸುತ್ತೇನೆ ಎನ್ನುವುದು ಸುಳ್ಳು. ಇದೆಲ್ಲ ಕೇವಲ ಊಹಾಪೋಹಾ ಅಷ್ಟೆ. ನಾನು ಜೆಡಿಎಸ್‌ನಲ್ಲಿಯ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ. ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರು ಪಕ್ಷ ಬಿಡುವುದಿಲ್ಲ. ನಾನು ಮತ್ತು ಅವರು ಮೂರು ದಿನ ಕೊಡಗಿನಲ್ಲಿದ್ದೆವು. ಪಕ್ಷ ಬಿಡುವ ಯಾವುದೇ ಬೆಳವಣಿಗೆ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net