ರಣಹೇಡಿ ಯಾರೆಂದು ಆತ್ಮಾವಲೋಕನವಾಗಲಿ: ಸಿ.ಪಿ.ಯೋಗೇಶ್ವರ್ ವಿರುದ್ಧ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಾಗ್ದಾಳಿ

Former Minister C.S. Puttaraju criticizes C.P. Yogeshwar Mandya
Published on

ಮಂಡ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಹೀಗಿರುವಾಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಣಹೇಡಿ ಎಂದು ಟೀಕಿಸುವುದು ಎಷ್ಟು ಸರಿ?. ಬಿಜೆಪಿಯಲ್ಲಿದ್ದಾಗ ನಾನೇ ಸ್ಪರ್ಧಿಸುತ್ತೇನೆಂದು ಮಾತು ಕೊಟ್ಟು ನಂತರ ವಿರೋಧಿ ಪಕ್ಷಕ್ಕೆ ಹೋಗಿ ಸ್ಪರ್ಧೆ ಮಾಡಿದ ಸಿ.ಪಿ.ಯೋಗೇಶ್ವರ್ ರಣಹೇಡಿಯೋ ಅಥವಾ ಕುಮಾರಸ್ವಾಮಿ ರಣಹೇಡಿಯೋ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಉಪಚುನಾವಣೆ ಗೆಲುವಿನ ಮದದಲ್ಲಿರುವ ಸಿ.ಪಿ.ಯೋಗೇಶ್ವರ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರ ಬಗ್ಗೆ ಲಘುವಾಗಿ ಮಾತನಾಡಿದಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಎಲ್ಲವನ್ನೂ ಪಡೆದುಕೊಂಡೆ ಹಾಗೂ ಕಾಂಗ್ರೆಸ್ ಮುಖಂಡರನ್ನು ಮೆಚ್ಚಿಸಿ ಸಚಿವ ಸ್ಥಾನ ಗಿಟ್ಟಿಸಬೇಕೆಂಬ ಉದ್ದೇಶದಿಂದ ಲಘುವಾಗಿ ಮಾತನಾಡುವುದು ತರವಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ, ಅಟಲ್‌ಬಿಹಾರಿ ವಾಜಪೇಯಿ, ದೇವೇಗೌಡರು, ನೀವು ಸೇರಿದಂತೆ ಎಲ್ಲರೂ ಚುನಾವಣೆಯಲ್ಲಿ ಸೋಲುಂಡಿದವರೇ ಆಗಿದ್ದಾರೆ. ಇದನ್ನು ಮರೆತು ಮಾತನಾಡುವುದು ಶೋಭೆ ತರುವುದಿಲ್ಲ. ದೇಶವನ್ನಾಳಿದ ಎಚ್.ಡಿ. ದೇವೇಗೌಡರನ್ನು ಮನೆಯಲ್ಲಿರಿ, ಎಚ್.ಡಿ. ಕುಮಾರಸ್ವಾಮಿ ಅವರನ್ನು ರಣಹೇಡಿ ಎಂದೇಳುವುದು ಗೌರವ ಕೊಡುತ್ತದೆಯೇ ಎಂದು ಕಿಡಿಕಾರಿದರು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅನಿವಾರ್ಯವಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕಾಯಿತು. ಜನಾಭಿಪ್ರಾಯ ಏನೇ ಬಂದಿರಬಹುದು. ಆದರೆ, ದೇವೇಗೌಡರು ಕೇವಲ ರಾಜಕಾರಣಕ್ಕಾಗಿ ರಾಜಕೀಯದಲ್ಲಿಲ್ಲ. ಅವರು ಹೋರಾಟ ಮಾಡದಿದ್ದರೆ ನೀರಾವರಿ ವಿಚಾರದಲ್ಲಿ ನಾವು ಏನೆಲ್ಲ ನಷ್ಟ ಅನುಭವಿಸಬೇಕಾಗಿತ್ತು ಎಂಬುದನ್ನು ತಿಳಿದವರನ್ನು ಕೇಳಿ ತಿಳಿದುಕೊಳ್ಳಿ. ಅದು ಬಿಟ್ಟು ನೀವು ಗೆದ್ದ ಮಾತ್ರಕ್ಕೆ ದೇವೇಗೌಡರು ಮನೆಗೆ ಹೋಗಿ ಎಂದು ಹೇಳುವ ನೈತಿಕತೆ ನಿಮಗಿಲ್ಲ ಎಂದು ಛೇಡಿಸಿದರು.

ಸಿಪಿವೈ 17 ಕೆರೆಗಳಿಗೆ ನೀರು ತುಂಬಿಸಿರುವುದಾಗಿ ಹೇಳಿಕೊಳ್ಳುತ್ತಾರೆ. ಅದಕ್ಕೆ ಮೊದಲು ಇಗ್ಗಲೂರು ಯೋಜನೆಯನ್ನು ದೇವೇಗೌಡರು ಮಾಡದಿದ್ದರೆ ನೀವು ಕೆರೆಗಳಿಗೆ ನೀರು ತುಂಬಿಸಲಾಗುತ್ತಿತ್ತೇ ಎಂದು ಪ್ರಶ್ನಿಸಿದ ಸಿ.ಎಸ್.ಪುಟ್ಟರಾಜು, ಇದಕ್ಕೆ ಕಾರಣರಾದವರ ಬಗ್ಗೆ ಲಘುವಾಗಿ ಮಾತನಾಡಬಾರದು. ಈಗ ಯೋಗೇಶ್ವರ್ ಆಯ್ಕೆ ಮಾಡಿಕೊಂಡು ಗೆದ್ದಿರುವ ಪಕ್ಷದಲ್ಲಿ ಘಟಸರ್ಪಗಳಿವೆ. ಅವುಗಳ ನಡುವೆ ಹೇಗೆ ಹೋರಾಟ ಮಾಡುತ್ತೀರೋ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಅವುಗಳು ನಿಮ್ಮನ್ನು ತಿಂದು ಹಾಕುತ್ತವೆ. ಅದನ್ನು ಮೊದಲು ನಿಭಾಯಿಸಿ, ನಂತರ ಬೇರೆಯವರ ಬಗ್ಗೆ ಮಾತನಾಡಿ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಬಿಜೆಪಿಯವರು ಯೋಗೇಶ್ವರ್ ವಿರುದ್ಧದ ದೂರುಗಳನ್ನು ಬಂಡಲ್ ಮಾಡಿಕೊಂಡಿದ್ದು, ಸರಿಯಾದ ಸಮಯದಲ್ಲಿ ಜಾತಕವನ್ನು ಬಯಲು ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ. ಕಾಂಗ್ರೆಸ್ ಪಕ್ಷದ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಂಡೂರು ಕ್ಷೇತ್ರದ ಅನ್ನಪೂರ್ಣ ಅವರ ಕುಟುಂಬ, ಅಷ್ಟೇ ಏಕೆ ನೀವು, ನಿಮ್ಮ ಸಹೋದರ, ನಿಮ್ಮ ಪತ್ನಿ ರಾಜಕೀಯದಲ್ಲಿಲ್ಲವೇ?. ಚನ್ನಪಟ್ಟಣ ಕ್ಷೇತ್ರದಲ್ಲಿ ಗೆದ್ದಿರಬಹುದು. ಕಾಲ ಹೀಗೆ ಇರುವುದಿಲ್ಲ. ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ. ಜೆಡಿಎಸ್ ಶಾಸಕರನ್ನು ಖರೀದಿಸಿ ಪಕ್ಷವನ್ನು ಮುಗಿಸುತ್ತೇನೆಂದು ಹೇಳಿರುವ ಯೋಗೇಶ್ವರ್, ಯಾವ ಶಾಸಕರನ್ನು ಖರೀದಿಸುತ್ತೀರಿ?. ಹಣದಿಂದ ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ ಎಂಬುದು ಅವರ ಭ್ರಮೆ. ಗೌರವವಾಗಿ ನಡೆದುಕೊಂಡು ಅಭಿವೃದ್ಧಿಯತ್ತ ಗಮನಹರಿಸಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net