‘ತುರ್ತು ಪರಿಸ್ಥಿತಿ’ ಕರಾಳ ನೆನಪು ಬಿಚ್ಚಿಟ್ಟ ಮಾಜಿ ಸಚಿವ ಬೆಳ್ಳುಬ್ಬಿ, ಬಿಜೆಪಿಯಿಂದ ಚರ್ಚಾಕೂಟ ಆಯೋಜನೆ

BELLUBBI PRESS MEET EMERGENCY
ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತು ಜೂ. 26 ರಂದು ಸಂಜೆ 5 ಗಂಟೆಗೆ ನಗರದ ಸಾಯಿ ವಿಹಾರದಲ್ಲಿ ಚರ್ಚಾಕೂಟ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ತಿಳಿಸಿದರು.

ರಾಜ್ಯಾದ್ಯಂತ ನಡೆಯುತ್ತಿರುವ ಈ ಚರ್ಚಾಕೂಟದ ಭಾಗವಾಗಿ ಜೂ. 25 ರಂದು ಜಿಲ್ಲೆಯ ಎಲ್ಲ ಮಂಡಲಗಳಲ್ಲಿ ಚರ್ಚೆ ನಡೆಯಲಿದ್ದು, ಜೂ.26 ರಂದು ವಿಜಯಪುರ ನಗರದಲ್ಲಿ ಜಿಲ್ಲಾಮಟ್ಟದ ಚರ್ಚಾಕೂಟ ನಡೆಯಲಿದೆ. ಜಿಲ್ಲೆ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದು, ಅಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿದ ಮಹನೀಯರನ್ನು ಸನ್ಮಾನಿಸಲಾಗುವುದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ತನ್ನ ಪ್ರಧಾನ ಮಂತ್ರಿಯ ಕುರ್ಚಿ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಳ್ಳಲಾಯಿತು. ಸರ್ಕಾರದ ವಿರುದ್ಧ ಯಾರೂ ಮಾತನಾಡುವಂತಿರಲಿಲ್ಲ, ಭಾರತ ಮಾತಾ ಕಿ ಜೈ ಎಂದರೂ ಬಂಧಿಸಲಾಯಿತು. ಭಾರತೀಯ ಜನಸಂಘ, ಸ್ವತಂತ್ರ ಪಕ್ಷ, ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಇರಿಸಿದ್ದರು. ಆರ್‌ಎಸ್‌ಎಸ್ ಬ್ಯಾನ್ ಮಾಡಲಾಯಿತು, ಶಾಖೆ ನಡೆಸುವಂತೆ ಇರಲಿಲ್ಲ. ಭಾರತದ ಸಂವಿಧಾನದ ಆಶಯಗಳನ್ನೇ ಬಲಿಕೊಡಲಾಯಿತು. ದೆಹಲಿಯಲ್ಲಿ ಮುಸ್ಲಿಂ ಏರಿಯಾದಲ್ಲಿ ಬಲವಂತವಾಗಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಯಿತು. ದೇಶದ ಇತಿಹಾಸದಲ್ಲಿಯೇ ಇದೊಂದು ಕರಾಳ ಕೃತ್ಯ ಎಂದರು.

ಜಯಪ್ರಕಾಶ ನಾರಾಯಣ ಸೇರಿದಂತೆ ಅನೇಕರು ತುರ್ತು ಪರಿಸ್ಥಿತಿ ಖಂಡಿಸಿ ಹೋರಾಟ ನಡೆಸಿದರು. ಭೂಗತವಾಗಿದ್ದುಕೊಂಡೇ ಕೈ ಬರಹದಲ್ಲಿ ಪತ್ರಿಕೆಗಳನ್ನು ನಡೆಸುವ ಮೂಲಕ ಜನರಲ್ಲಿ ವಿಚಾರ ಬಿತ್ತಿದರು. ಹೋರಾಟ ರೂಪಿಸಿದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿಯೂ ಹೋರಾಟದ ಬೀಜ ಬಿತ್ತಲಾಯಿತು. ಜ್ಯೋತಿ ಪ್ರಕಾಶ ಸಾಳುಂಕೆ, ಆರ್‌ಎಸ್‌ಎಸ್ ಸಂಚಾಲಕ ಡಾ.ಬಸಯ್ಯ ಗಣಕುಮಾರ, ಡಾ. ಮಲ್ಲೇಶಪ್ಪ ಬಡಿಗೇರ, ದುಂಡಪ್ಪ ಕೊಟ್ರೆ ಎಂಬುವರು ತುರ್ತು ಪರಿಸ್ಥಿತಿ ಸಂದರ್ಭ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜನಾಭಿಪ್ರಾಯ ರೂಪಿಸಿದರು. ನರಗುಂದ ಜಗನ್ನಾಥ ಜೋಶಿ ಅವರು ಕೊಲ್ಹಾರಕ್ಕೆ ಬರುತ್ತಿದ್ದರು. ಕೇವಲ 40 ಜನರನ್ನು ಸೇರಿಸಿ ಅಂದು ಹೋರಾಟ ರೂಪಿಸಿದ್ದು, ತಮ್ಮನ್ನು ಕೊಲ್ಹಾರದಲ್ಲಿ ಎರಡು ದಿನ ಹಾಗೂ ಬ.ಬಾಗೇವಾಡಿಯಲ್ಲಿ 8 ದಿನ ಜೈಲಿನಲ್ಲಿರಿಸಲಾಗಿತ್ತು ಎಂದು ಸ್ಮರಿಸಿಕೊಂಡರು.

ಕಾಳಹಸ್ತೇಸ್ವರ ಸ್ವಾಮೀಜಿ ಸೇರಿ ಅನೇಕರು ತಮ್ಮೊಂದಿಗೆ ಜೈಲಿಗೆ ಬಂದಿದ್ದರು. ಅದೊಂದು ಎರಡನೇ ಸ್ವಾತಂತ್ರ್ಯ ಹೋರಾಟವೇ ಆಗಿತ್ತು. ಹೀಗಾಗಿ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಜನ ಹೀನಾಯವಾಗಿ ಸೋಲಿಸಿದರು. ಸ್ವತಃ ಇಂದಿರಾಗಾಂಧಿ ಅವರನ್ನೇ ಸೋಲಿಸಲಾಯಿತು. ಆದರೂ ಕಾಂಗ್ರೆಸ್ ಈವರೆಗೆ ಪಾಠ ಕಲಿತಿಲ್ಲ. ಈಗಲೂ ಚಕ್ರವರ್ತಿ ಸೂಲಿಬೆಲೆ ಅವರಂಥವರನ್ನು ಮಾತನಾಡಬಾರದು ಎಂದು ನಿರ್ಬಂಧ ಹೇರುವ ಮೂಲಕ ಮತ್ತದೇ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಮಹೇಂದ್ರ ನಾಯಕ, ಉಮೇಶ ಕಾರಜೋಳ, ಸಂಗಮೇಶ ಹೌದೆ, ಚಿದಾನಂದ ಚಲವಾದಿ, ಚಂದ್ರಶೇಖರಯ್ಯ ಗಣಕುಮಾರ, ವಿಜಯ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net