

ಮುದಗಲ್: ಐತಿಹಾಸಿಕ ಮುದಗಲ್ ಪಟ್ಟಣಕ್ಕೆ ಮಂಜೂರಾದ ನವಗ್ರಾಮ ಕುಡಿವ ನೀರಿನ ಯೋಜನೆಗೆ ಬಾಕಿ ಉಳಿದ ಅನುದಾನ 44.79 ಕೋಟಿ ರೂ. ಬಿಡುಗಡೆಗೊಳಿಸಿ, ಮರು ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಮಾಜಿ ಸಚಿವ ಅಮರೇಗೌಡ ಬಯ್ಯಪುರ ಹಾಗೂ ಎಂಎಲ್ಸಿ ಶರಣಗೌಡ ಬಯ್ಯಪುರ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಮುದಗಲ್ ಪಟ್ಟಣದಲ್ಲಿ ಕುಡಿವ ನೀರು ಸರಬರಾಜು ಕಾಮಗಾರಿ 2018ರಲ್ಲಿ ಆರಂಭಿಸಿದ್ದು, ಒಪ್ಪಂದದ ಪ್ರಕಾರ 2019ರ ಸೆಪ್ಟೆಂಬರ್‌ಗೆ ಪೂರ್ಣಗೊಳಿಸಬೇಕಿತ್ತು. ಆದರೆ, ಬಾಕಿ ಅನುದಾನ ಪಾವತಿಸದ ಕಾರಣ ಗುತ್ತಿಗೆದಾರರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರು.
2022ರ ಆಗಸ್ಟ್‌ನಲ್ಲಿ ಗುತ್ತಿಗೆದಾರರಿಗೆ ಮತ್ತೆ ಅವಧಿ ವಿಸ್ತರಣೆ ಮಾಡಿದರೂ ಕಾಮಗಾರಿ ಪೂರ್ಣಗೊಳಿಸಲು ವಿಫಲವಾದ ಕಾರಣ ಗುತ್ತಿಗೆ ಒಪ್ಪಂದ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅಂದಾಜು 44.79 ಕೋಟಿ ರೂ. ಬೇಕಿದ್ದು, ಒದಗಿಸಿದರೆ ಕಾಮಗಾರಿ ಪೂರ್ಣಗೊಂಡು ಪಟ್ಟಣದ ಜನತೆಗೆ ನಿರಂತರ ಕುಡಿವ ನೀರು ಪೂರೈಸಲು ಸಾಧ್ಯವಾಗಲಿದೆ ಎಂದು ಮನವರಿಕೆ ಮಾಡಿದರು.
ಲಿಂಗಸುಗೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಪ್ರಮುಖರಾದ ಅಶೋಕಗೌಡ ಪಾಟೀಲ್, ಅನಿಲ್ ಬುಶೆಟ್ಟಿ, ವೀರೇಶ ವಡ್ಡರ, ಕೇಶವರೆಡ್ಡಿ ಯರದಿಹಾಳ, ಜೋಸೆಫ್ ಈರ‌್ಲಾ, ಚೆನ್ನಾರಡ್ಡಿ ಬಿರಾದಾರ, ಸೋಮಶೇಖರ ಐದನಾಳ, ಕೇಶವರಡ್ಡಿ, ಬಸವರಾಜ ಗಣೇಕಲ್, ಮೆಹಬೂಬ್ ಬಾರಿಗಿಡ, ಮಹ್ಮದ ಸಾಧಿಕಲಿ, ಮೌಲಾನಾ ಜಮೀರ ಅಹ್ಮದ ಖಾಜಿ, ರಾಘವೇಂದ್ರ ದೇಶಪಾಂಡೆ ಇತರರಿದ್ದರು.
ಕೋಟ್: ಮುದಗಲ್ ಪಟ್ಟಣದ ಕುಡಿವ ನೀರಿನ ಯೋಜನೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚಿಸಿ ಕಾಮಗಾರಿಗೆ ಮರು ಚಾಲನೆ ನೀಡುವ ಭರವಸೆ ನೀಡಿದ್ದಾರೆ.
> ಶರಣೇಗೌಡ ಪಾಟೀಲ್ ಬಯ್ಯಪುರ
ಎಂಎಲ್ಸಿ, ಮುದಗಲ್