

ಮಂಗಳೂರು: ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ನಿರ್ಬಂಧ ವಿಚಾರಕ್ಕೆ ಪೂರ್ಣ ಬೆಂಬಲವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಾರ್ವಜನಿಕ ಸ್ಥಳಗಳಲ್ಲಿ ಶಾಖೆ ಮಾಡಿ ಮಕ್ಕಳ ಮೇಲೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಇದರಿಂದ ಸಾಮಾಜಿಕ ಸ್ವಾಸ್ಥೃಕ್ಕೆ ಬಲವಾದ ಪೆಟ್ಟು ಬೀಳುತ್ತದೆ. ಇದರಿಂದಾಗಿ ಜಿಲ್ಲೆಯಲ್ಲಿ ಮತೀಯ ಕುತ್ತು ಬರಲು ಕಾರಣವಾಗಿದೆ ಎಂದರು.
ಆರ್‌ಎಸ್‌ಎಸ್ ಹಾಗೂ ಅದರ ಸಹ ಸಂಘಟನೆಗಳಿಂದ ಸಮಾಜದ ಎಲ್ಲಾ ವರ್ಗದ ಜನರ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಧರ್ಮಾಧರಿತ ಹತ್ಯೆಗಳಾಗಿವೆ. ಜನರಲ್ಲಿ ಭೇದ ಹುಟ್ಟಿಸುವ ಚಟುವಟಿಕೆ ಇದಕ್ಕೆ ಮೂಲ ಕಾರಣ. ತಾನು ಸೈದ್ಧಾಂತಿಕ ನಿಲುವನ್ನು ಒಪ್ಪಿಕೊಂಡ ಕಾಂಗ್ರೆಸ್ ಪಕ್ಷದಲ್ಲಿದ್ದು ಆರ್‌ಎಸ್‌ಎಸ್ ಚಟುವಟಿಕೆಯನ್ನು ವಿರೋಧಿಸುವುದಾಗಿ ರಮಾನಾಥ ರೈ ಹೇಳಿದರು.
ಆರ್‌ಎಸ್‌ಎಸ್‌ಗೆ ಹೆದರುವವರು ಕಾಂಗ್ರೆಸ್ ಪಕ್ಷದಲ್ಲಿ ಇರುವುದು ಬೇಡ ಎಂದು ಹೇಳಿದ್ದಾರೆ. ಅವರ ಮಾತಿಗೆ ಬೆಂಬಲವಿದೆ. ಹಿಂಸೆಗೆ ಪ್ರಚೋದನೆ ನೀಡುವ, ಭಯ ಹುಟ್ಟಿಸುವ ಯಾವುದೇ ಪಕ್ಷವನ್ನು ಖಂಡಿಸುತ್ತೇವೆ. ದೇಶದ ಜಾತ್ಯತೀತ ಮೌಲ್ಯ ರಕ್ಷಿಸಿ, ಸುಂದರ ಸಮಾಜ ನಿರ್ಮಾಣ ಮಾಡುವುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ ಎಂದರು.
ಬಿಜೆಪಿ ಧರ್ಮ, ದೇವರ ನಾಟಕ ಮಾಡಿ ಜನರನ್ನು ವಂಚಿಸಿ ಓಟು ಪಡೆಯುತ್ತಿದೆ. ಓಟಿಗಾಗಿ ವಿಷ ಬೀಜ ಬಿತ್ತಿ ಜನರನ್ನು ಒಡೆದು ಆಳುತ್ತಿದೆ. ಬಿಜೆಪಿಯವರಿಗೆ ಧರ್ಮ, ನ್ಯಾಯ, ದೇಶಪ್ರೇಮ ಕಿಂಚಿತ್ ಕೂಡಾ ಇಲ್ಲ ಎಂದು ರಮಾನಾಥ ರೈ ಹೇಳಿದರು.
ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆ, ಮುಖಂಡರಾದ ಬೇಬಿ ಕುಂದರ್, ಪದ್ಮನಾಭ ಕೋಟ್ಯಾನ್, ಟಿ.ಕೆ.ಸುಧೀರ್, ಮಂಜುಳಾ ನಾಯಕ್, ರಮಾನಂದ ಪೂಜಾರಿ, ಅಪ್ಪಿ ಮೊದಲಾದವರಿದ್ದರು.