ಹೆಚ್ಚುತ್ತಿರುವ ಭೂ ಹಗರಣ ಪ್ರಕರಣ, ತನಿಖೆಗೆ ವಿಶೇಷ ತಂಡ ರಚಿಸಲು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹ

APPU PATTANASHETTI MANAVI
ವಿಜಯಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಇದ್ದಾರೆ.
Published on

ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಭೂಮಿ ಕಬಳಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ವಿಶೇಷ ತನಿಖಾ ತಂಡ ರಚಿಸಿ ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಸೋಮವಾರ ಭೇಟಿ ನೀಡಿ ಎಎಸ್‌ಪಿ ಶಂಕರ ಮಾರಿಹಾಳ ಅವರಿಗೆ ಮನವಿ ಸಲ್ಲಿಸಿದ ಅವರು, ನಕಲಿ ದಾಖಲೆ ಸೃಜಿಸಿ ಜನರನ್ನು ವಂಚಿಸುತ್ತಿರುವ ಭೂ-ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಖೊಟ್ಟಿ ದಾಖಲೆ ಸೃಷ್ಠಿಸಿ ಮೋಸ-ವಂಚನೆ ಮಾಡುವವರಿಂದಾಗಿ ಜನ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರತಿ ದಿನ ಜಮೀನು ದಾಖಲೆ ಪರಿಶೀಲಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೇ ಇಂಥದ್ದೊಂದು ಖೊಟ್ಟಿ ದಾಖಲೆ ಸೃಷ್ಠಿಸುವ ದಂಧೆ ಬೆಳಕಿಗೆ ಬರುತ್ತಿರುವ ಕಾರಣ ಜನ ಯಾರನ್ನು ನಂಬುವುದು ಮತ್ತು ಇನ್ನಾರನ್ನು ಬಿಡುವುದು ಎಂಬ ಸಂದಿಗ್ದತೆಗೆ ಸಿಲುಕಿದ್ದಾರೆ. ಜನರನ್ನು ವಂಚಿಸುವ ವ್ಯವಸ್ಥಿತ ಜಾಲವೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಈ ಜಾಲಕ್ಕೆ ಈಗಾಗಲೇ ನೂರಾರು ಜನ ಹಣ-ಆಸ್ತಿ ಕಳೆದುಕೊಂಡಿದ್ದಾರೆ. ಇಂತಹ ವಂಚಕರ ಜಾಲ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ಬಡ ಜನರು ಈಗಾಗಲೇ ಮೋಸ ಹೋಗಿದ್ದಾರೆ. ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿ ನಿವೇಶನ, ಜಮೀನು ಖರೀದಿ ಮಾಡುವ ಬಡವರು, ಈ ರೀತಿಯ ವಂಚನೆಗೆ ಒಳಗಾಗಿ ತಮ್ಮ ಆಸ್ತಿ ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಜಮೀನು ಕಳೆದುಕೊಂಡವರು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ನೊಂದ ಬಡವರಿಗೆ ನ್ಯಾಯ ದೊರಕುತ್ತಿಲ್ಲ. ಬಡ ಜನರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಇಂತಹ ಪ್ರಕರಣಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಕೂಡಲೇ ಈ ರೀತಿಯ ಪ್ರಕರಣಗಳನ್ನು ಭೇದಿಸಿ ಮೂಲ ಮಾಲೀಕರಿಗೆ ಅವರ ಜಮೀನು-ನಿವೇಶನ ಪುನ: ಹಂಚಿಕೆಯಾಗುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಮಾಡಬೇಕು. ಜಿಲ್ಲೆಯಲ್ಲಿ ಈ ರೀತಿಯ ಭೂ ಮಾಫಿಯಾವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net