

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಅವರನ್ನು ಅಮಾನತು ಮಾಡಬೇಕೆಂದು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೇ 17ರಂದು ನಗರದಲ್ಲಿ ಮೈಸೂರು ವಿಭಾಗ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.
ಮಹೇಶ ಜೋಶಿ ಅವರ ಆರ್ಥಿಕ ಅಶಿಸ್ತು ಮತ್ತು ಸರ್ವಾಧಿಕಾರದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಇದಲ್ಲದೆ ಎಲ್ಲ ಜಿಲ್ಲೆಗಳ ಕಸಾಪ ಆಡಳಿತ ಮಂಡಳಿಯನ್ನು ತಿದ್ದುಪಡಿ ಮೂಲಕ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ್ದ 30 ಕೋಟಿ ರೂ ಅನುದಾನದಲ್ಲಿ 2.5 ಕೋಟಿ ರೂಗಳನ್ನು ಕನ್ನಡ ಸಾಹಿತ್ಯ ಪರಿಷತ್ ಪಡೆದಿದೆ. ಆದರೆ ಮಹೇಶ್ ಜೋಶಿ ಅವರು 2.5 ಕೋಟಿ ರೂ.ಗೆ ಇದುವರೆಗೂ ಲೆಕ್ಕ ನೀಡಿಲ್ಲ. ಇನ್ನೂ 6 ತಿಂಗಳ ಸಮಯವಿದೆ. ನಂತರ ಲೆಕ್ಕ ಕೊಡುತ್ತೇನೆಂದು ಹೇಳುವ ಮೂಲಕ ಉದ್ಧಟತನ ಮೆರೆಯುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಪ್ರೊ.ಜಿ.ಟಿ.ವೀರಪ್ಪ, ಎಂ.ವಿ.ಧರಣೇಂದ್ರಯ್ಯ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಸ್.ಕೆ.ಮಹೇಶ್, ಸಿ.ಕುಮಾರಿ ಇದ್ದರು.