ಮಂಡ್ಯ ವಿವಿ ಮುಚ್ಚಲು ಹುನ್ನಾರ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಆರೋಪ

Former Legislative Council member press conference Mandya
Published on

ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಗೆ ವಿಲೀನ ಮಾಡುತ್ತಿದ್ದೇವೆಂದು ಹೇಳಿ ಸಾರ್ವಜನಿಕರ ದಿಕ್ಕು ತಪ್ಪಿಸುವುದರ ಜತೆಗೆ ಮಂಡ್ಯ ವಿವಿಯನ್ನು ಮುಚ್ಚುವ ಹುನ್ನಾರ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

ವಿವಿ ಮುಚ್ಚುವ ಪ್ರಕ್ರಿಯೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಸಹಮತ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ ವಿವಿ ನೀಡಿರುವುದು ಕೇಂದ್ರ ಸರ್ಕಾರ. ಆದರೆ ರಾಜ್ಯ ಸರ್ಕಾರ ಆರ್ಥಿಕ ಹೊರೆಯ ನೆಪವೊಡ್ಡಿ ವಿವಿ ಮುಚ್ಚಲು ಮುಂದಾಗಿದೆ. ವಾಸ್ತವವಾಗಿ ಮೈಸೂರು ವಿವಿ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಖಾಯಂ ಉಪನ್ಯಾಸಕರ ನೇಮಕ ಹಾಗೂ ಹಾಲಿ ಉಪನ್ಯಾಸಕರಿಗೆ ವೇತನ ನೀಡಲು ಸಂಕಷ್ಟ ಎದುರಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ವಿವಿ ಪ್ರತಿಷ್ಠಿತ ಹೆಜ್ಜೆ ಇಡುತ್ತಿದ್ದು, ಈಗ ಹೆಜ್ಜೆ ತಪ್ಪಿದರೆ ಸರಿಪಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಇಲ್ಲದ ಕಾರಣ ವಿವಿಯನ್ನು ಮುಚ್ಚುವ ಅತಿರೇಖತೆ ತೋರುತ್ತದೆ. ರೂಸಾ ಅನುದಾನಡಿ ಮಂಡ್ಯ ವಿವಿಗೆ ಬೇಕಾದ ಅಗತ್ಯ ಕಟ್ಟಡಗಳು ನಿರ್ಮಾಣವಾಗಿದ್ದು, 8 ಕಿ.ಮೀ ವ್ಯಾಪ್ತಿಯಲ್ಲಿ 100 ಎಕರೆ ವಿಸ್ತೀರ್ಣ ಜಾಗವಿದೆ. ಮಾತ್ರವಲ್ಲದೆ ಅಗತ್ಯ ಕಟ್ಟಡಗಳಿವೆ. ವಿಜ್ಞಾನ ಬೋಧನೆಗೆ ಅನುಕೂಲಕರ ಪ್ರಯೋಗಾಲಯಗಳಿವೆ. ಸೌಲಭ್ಯವಿದ್ದರೂ ವಿವಿ ಮುಚ್ಚುವ ನಿರ್ಧಾರವೇಕೆ ಎಂದು ಪ್ರಶ್ನಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಮಂಡ್ಯ ವಿವಿಯು ತನ್ನ ಛಾಪನ್ನು ಮೂಡಿಸಿದೆ. ಅಧಿಕಾರ ವಿಕೇಂದ್ರೀಕರಣ ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ. ಅದನ್ನು ಕೇಂದ್ರೀಕರಣಗೊಳಿಸುತ್ತಿರುವ ಮನಸ್ಸುಗಳ ಬಗ್ಗೆ ನಮ್ಮ ತಿರಸ್ಕಾರವಿದ್ದು, ಈ ವಿಷಯದ ಬಗೆಗಿನ ವಾದಗಳು ಸಂವಾದವಾಗಿ ರೂಪುಗೊಂಡಾಗ ಮಾತ್ರ ತಾರ್ಕಿಕತೆಯನ್ನು ತಲುಪುತ್ತದೆ ಎಂದರು.

ಈ ನಡುವೆಯೂ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಮಂಡ್ಯ ವಿವಿಯನ್ನು ಉಳಿಸಿಕೊಳ್ಳಲು ದನಿಯೆತ್ತಿದ್ದು, ವಿವಿ ಸಂಬಂಧ ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗಿದ್ದಾರೆ. ವಿವಿಯ ಪ್ರವೇಶ ಕಮಾನಿಗೆ 3 ಕೋಟಿ ರೂ ವೆಚ್ಚದಲ್ಲಿ ಗುದ್ದಲಿಪೂಜೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಚಿಂತಕರಾದ ಜಿ.ಟಿ.ವೀರಪ್ಪ, ಪ್ರೊ.ಹುಲ್ಕೆರೆ ಮಹದೇವು, ಇಂಡುವಾಳು ಚಂದ್ರಶೇಖರ್, ಎಸ್.ಬಿ.ಶಂಕರೇಗೌಡ, ಎಸ್.ನಾರಾಯಣ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net