ಜಿಲ್ಲೆಯ ರೈತರ ತಾಳ್ಮೆ ಪರೀಕ್ಷಿಸಬೇಡಿ: ರಾಜ್ಯಸರ್ಕಾರಕ್ಕೆ ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಎಚ್ಚರಿಕೆ

Former JDS MLA Annadani supports Cauvery protest
Published on

ಮಂಡ್ಯ: ರಾಜ್ಯದಲ್ಲಿ 135 ಸ್ಥಾನ ಗೆದ್ದಿದ್ದೇವೆಂದು ಕಾಂಗ್ರೆಸ್‌ಗೆ ಜಂಬ ಬಂದಿದೆ. ಆದರೆ ರೈತರ ವಿರುದ್ಧ ನಡೆದುಕೊಂಡ ಯಾವುದೇ ಸರ್ಕಾರ ಉಳಿಯಲ್ಲ ಎಂದು ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಎಚ್ಚರಿಕೆ ನೀಡಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡದಂತೆ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯಸರ್ಕಾರಕ್ಕೆ ಇದರ ಬಗ್ಗೆ ಪರಿಜ್ಞಾನ ಇಲ್ಲ. ರೈತರ ವಿರುದ್ಧ ನಡೆದುಕೊಂಡ ಸರ್ಕಾರ ಉಳಿಯಲ್ಲ. ಅಧಿಕಾರಕ್ಕೂ ಬರುವ ಮುನ್ನ ಏನು ಭರವಸೆ ಕೊಟ್ರಿ?. ಅನ್ನದಾತರ ಪರ ಇರುತ್ತೇವೆಂದು ಹೇಳಿ ಈಗ ನೀವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿ ಅಂತಿರಾ ಎಂದು ಪ್ರಶ್ನಿಸಿದರು.

ಬೆಳೆ ಹಾಕದಂತೆ ನಮ್ಮ ರೈತರಿಗೆ ನೋಟಿಸ್ ಕೊಡ್ತಿರಾ?. ಆದರೆ ತಮಿಳುನಾಡಿನವರು 3ನೇ ಬೆಳೆಗೆ ನೀರು ಕೇಳಿದ್ದಕ್ಕೆ ಕೊಡುತ್ತಿದ್ದೀರಿ. ರಾಜ್ಯದ ಪ್ರತಿ ಜಿಲ್ಲೆಯ ರೈತರು ನಿಮಗೆ ಶಾಪ ಹಾಕುತ್ತಿದ್ದಾರೆ. ಮಾತ್ರವಲ್ಲದೆ ಚಳವಳಿಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಹಿಂದಿನ ಹೋರಾಟ ನೋಡಿ ಸಿದ್ದರಾಮಯ್ಯ ಅವರೇ, ರೈತರನ್ನ ಕೆಣಕುವ ಹಾಗೂ ಅವರ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ಬೇಡ. ಮಂಡ್ಯ ಜನ ಸಿಡಿದ್ದೆದ್ದು ನಿಂತರೆ, ನಿಮ್ಮ ಕುರ್ಚಿ ಹಾಗೂ ಸರ್ಕಾರ ನಡುಗುತ್ತದೆ. ರೈತರ ಹೋರಾಟ ಕೇಳಿಸ್ತಿಲ್ವಾ?. ಆದರೂ ನೀರು ಬಿಡುತ್ತಿದ್ದರಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಆಗುತ್ತದೆ. ಅಧಿಕಾರವನ್ನು ಕಳೆದು ಕೊಳ್ಳುತ್ತೀರಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲವೇ, ಕಣ್ಣು ಕಾಣಿಸುತ್ತಿಲ್ಲವೇ?. ಸುಮ್ಮನೆ ಕುಳಿತು ಹೋರಾಟ ಮಾಡುತ್ತಿದ್ದಾರೆಂದು ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀರಾ. ಮಂಡ್ಯ ಜಿಲ್ಲೆಯ ಜನರ ಬಳಿ ಚುನಾವಣೆಯಲ್ಲಿ ಗೆಲ್ಲಿಸಲು ಮನವಿ ಮಾಡಿದ್ದೀರಿ. ಆದರೆ ತಿರಸ್ಕರಿಸದೆ ನಿಮ್ಮನ್ನು ಗೆಲ್ಲಿಸಿದ್ದರು. ಡಿ.ಕೆ.ಶಿವಕುಮಾರ್ ನೀರಾವರಿ ಮಂತ್ರಿಯಾಗಿ ಜಿಲ್ಲೆಯ ಜನರ ಕಷ್ಟ ಏಕೆ ಕೇಳುತ್ತಿಲ್ಲ. ಜಿಲ್ಲೆಯ ಜನರು ಮುಂದೆ ತಕ್ಕ ಪಾಠ ಕಲಿಸುತ್ತಾರೆ. ಸ್ಟಾಲಿನ್ ಬಗ್ಗೆ ನಿಮಗೆ ಗೌರವ ಹೆಚ್ಚು. ಆದ್ದರಿಂದ ರೈತರ ಬಗ್ಗೆ ಉಡಾಫೆಯಾಗಿ ಮಾತನಾಡುತ್ತೀರಾ ಎಂದು ಟೀಕಾ ಪ್ರಹಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net